ಹೊರಗುತ್ತಿಗೆ ವಹಿವಾಟಿನಿಂದಾಗಿ ವಾಸ್ತವತೆಯಲ್ಲಿ ಅಮೆರಿಕದಲ್ಲಿ ಸಾವಿರಾರು ಹುದ್ದೆಗಳು ಸೃಷ್ಟಿಯಾಗಿರುವುದರಿಂದ, ಹೊರಗುತ್ತಿಗೆ ವಹಿವಾಟಿಗೆ ನಿಷೇಧ ಹೇರುವುದು ಸೂಕ್ತವಲ್ಲ ಎಂದು ಭಾರತದ ಪ್ರವಾಸದಲ್ಲಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೆ ಮನವರಿಕೆ ಮಾಡಿಕೊಡುವ ಸಾಧ್ಯತೆಗಳಿವೆ ಎಂದು ವಹಿವಾಟಿನ ಮೂಲಗಳು ತಿಳಿಸಿವೆ.
ಹೊರಗುತ್ತಿಗೆ ನಿಷೇಧ ವಿಷಯ ಒಬಾಮಾ ಭೇಟಿ ಸಂದರ್ಭದಲ್ಲಿ ಖಂಡಿತವಾಗಿ ಚರ್ಚೆಗೆ ಬರಲಿದೆ ಎಂದು ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ನಿರುಪಮಾ ರಾವ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇತ್ತಿಚೆಗೆ ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್(ಎಫ್ಐಸಿಸಿಐ) ಅಧ್ಯಯನ ನಡೆಸಿ ವರದಿಯನ್ನು ಸಲ್ಲಿಸಿದ್ದು, ಹೊರಗುತ್ತಿಗೆ ವಹಿವಾಟಿನಿಂದಾಗಿ ಉಭಯ ದೇಶಗಳಲ್ಲಿ ಸಾವಿರಾರು ಹುದ್ದೆಗಳು ಸೃಷ್ಟಿಯಾಗಿವೆ ಎಂದು ರಾವ್ ಹೇಳಿದ್ದಾರೆ.
ಕಳೆದ 2000ರಿಂದ ಭಾರತದಲ್ಲಿ, ಅಮೆರಿಕ ವಾರ್ಷಿಕವಾಗಿ 9 ಬಿಲಿಯನ್ ಡಾಲರ್ ಹೂಡಿಕೆ ಮಾಡುವ ರಾಷ್ಟ್ರಗಳಲ್ಲಿ ಮೂರನೇ ಸ್ಥಾನವನ್ನು ಪಡೆದಿದೆ.ಅದರಂತೆ, ಭಾರತ ಕೂಡಾ ಅಮೆರಿಕಾದ ಆರ್ಥಿಕತೆಯಲ್ಲಿ ಮಹತ್ತರ ಪಾತ್ರವಹಿಸಿದೆ ಎಂದು ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ನಿರುಪಮಾ ರಾವ್ ತಿರುಗೇಟು ನೀಡಿದ್ದಾರೆ.