ಮುಂಬೈ (ಪಿಟಿಐ), ಭಾನುವಾರ, 7 ನವೆಂಬರ್ 2010( 13:39 IST )
ದೇಶಕ್ಕೆ ಅಗತ್ಯವಾದ ಉನ್ನತ ಮಟ್ಟದ ತಂತ್ರಜ್ಞಾನ ಉಪಕರಣಗಳಿಗೆ ಹೇರಿದ ನಿಷೇಧವನ್ನು ತೆರುವುಗೊಳಿಸಿ, ಭಾರತ ಮತ್ತು ಅಮೆರಿಕದ ಮಧ್ಯೆ ವಹಿವಾಟು ಸುಧಾರಣೆಗೆ ಆದ್ಯತೆ ನೀಡಲಾಗುವುದು ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಹೇಳಿದ್ದಾರೆ.
ಬರಾಕ್ ಒಬಾಮ ಪ್ರವಾಸದ ಅವಧಿಯಲ್ಲಿ ಅವರು ಆರ್ಥಿಕತೆ, ಭದ್ರತೆ ಹಾಗೂ ದ್ವಿಬಳಕೆ ವಸ್ತುಗಳ ಮೇಲಿನ ರಫ್ತು ನಿಯಂತ್ರಣ ಸಡಿಲತೆ ಸೇರಿ ರಾಜಕೀಯ ವಿಷಯಗಳನ್ನು ಒಳಗೊಂಡು ವಿಸ್ತೃತ ವಲಯದ ಮೇಲೆ ಸುಮಾರು 18 ಘೋಷಣೆ (ಒಪ್ಪಂದ)ಗಳನ್ನು ಮಾಡುವ ನಿರೀಕ್ಷೆಯಿದೆ.
ಮಧ್ಯಾಹ್ನ 12.50ಕ್ಕೆ ಅಮೆರಿಕ ವಾಯುಪಡೆಯ‘ಏರ್‌ಫೋರ್ಸ್ ಒನ್’ ವಿಮಾನದಲ್ಲಿ ಬಂದಿಳಿದ ಒಬಾಮ ದಂಪತಿಯನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚವಾಣ್, ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಸಚಿವ ಸಲ್ಮಾನ್ ಖುರ್ಷೀದ್, ಭಾರತದಲ್ಲಿನ ಅಮೆರಿಕ ರಾಯಭಾರಿ ಟಿಮೋತಿ ರೋಮರ್, ಅಮೆರಿಕದಲ್ಲಿನ ಭಾರತೀಯ ರಾಯಭಾರಿ ಮೀರಾ ಶಂಕರ್ ಮತ್ತಿತರ ಗಣ್ಯರು ಹೃತ್ಪೂರ್ವಕವಾಗಿ ಬರಮಾಡಿಕೊಂಡರು.
ಭಾರತಕ್ಕೆ ಆರನೇ ಮತ್ತು ಕಳೆದ 10 ವರ್ಷಗಳಲ್ಲಿ ಮೂರನೇ ಅಮೆರಿಕ ಅಧ್ಯಕ್ಷರಾಗಿ ಭೇಟಿ ನೀಡಿರುವ ಒಬಾಮ ಅವರೊಡನೆ ಪತ್ನಿ ಮಿಶೆಲ್, ಅವರ ಸಚಿವ ಸಂಪುಟ ಸಹೋದ್ಯೋಗಿಗಳು, ಆ ದೇಶದ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಟಾಮ್ ಡೋನಿಲಾನ್ ಹಾಗೂ ಸುಮಾರು 200 ವಾಣಿಜ್ಯ ಪ್ರಮುಖರು ಬಂದಿದ್ದಾರೆ.ದೇಶಕ್ಕೆ ಇಷ್ಟೊಂದು ಸಂಖ್ಯೆಯ ಅಮೆರಿಕ ನಿಯೋಗವೊಂದು ಬಂದಿರುವುದು ಇದೇ ಮೊದಲು.