ದೇಶದ ಬೃಹತ್ ತೈಲ ಸಂಸ್ಥೆಯಾದ ಸರಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೋರೇಶನ್ (ಐಒಸಿ) ಕಳೆದ ಮಧ್ಯರಾತ್ರಿಯಿಂದ ಪ್ರತಿ ಲೀಟರ್ ಪೆಟ್ರೋಲ್ ದರ 0.32 ಪೈಸೆ ಹೆಚ್ಚಳ ಘೋಷಿಸಿದೆ.
ಐಒಸಿ ಸಹೋದರ ಸಂಸ್ಥೆಯಾದ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್(ಎಚ್‌ಪಿಸಿಎಲ್) ಸಂಸ್ಥೆ ಈಗಾಗಲೇ ಪ್ರತಿ ಲೀಟರ್ ಪೆಟ್ರೋಲ್ ದರದಲ್ಲಿ 31ಪೈಸೆ ಹೆಚ್ಚಳ ಘೋಷಿಸಿದ್ದು, ಇಂದಿನಿಂದ ಜಾರಿಗೆ ಬಂದಿದೆ.
ಕೇಂದ್ರ ಸರಕಾರ ದರ ಏರಿಕೆ ಕುರಿತಂತೆ, ತೈಲ ಕಂಪೆನಿಗಳಿಗೆ ಮುಕ್ತ ಸ್ವಾತಂತ್ರ್ಯ ನೀಡಿದ ನಂತರ, ಪೆಟ್ರೋಲ್ ದರಗಳಲ್ಲಿ ಸತತ ನಾಲ್ಕನೇ ಬಾರಿಗೆ ದರ ಏರಿಕೆಯಾಗಿದೆ.
ಅಂತಾರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ದರ ಏರಿಕೆಯಾಗಿದ್ದರಿಂದ, ಪೆಟ್ರೋಲ್ ದರದಲ್ಲಿ ಏರಿಕೆ ಘೋಷಿಸಲಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೋರೇಶನ್ ಮುಖ್ಯಸ್ಥ ಬಿ.ಎಂ.ಬನ್ಸಾಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪ್ರಸ್ತುತ ದೆಹಲಿಯಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 52.59 ರೂಪಾಯಿಗಳಾಗಿದ್ದು, ಇಂದಿನಿಂದ ಗ್ರಾಹಕರು ಪ್ರತಿ ಲೀಟರ್‌ಗೆ 52.91 ರೂಪಾಯಿ ಪಾವತಿಸಬೇಕಾಗಿದೆ.