ಸತ್ಯಂ ಕಂಪ್ಯೂಟರ್ ಬಹುಕೋಟಿ ಹಗರಣದ ರೂವಾರಿ ಬಿ.ರಾಮಲಿಂಗಾರಾಜು ಜಾಮೀನು ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ, ಸಿಬಿಐ ನ್ಯಾಯಾಲಯಕ್ಕೆ ಶರಣಾಗಿದ್ದಾರೆ ಎಂದು ನ್ಯಾಯಾಲಯದ ಮೂಲಗಳು ತಿಳಿಸಿವೆ.
ದೇಶದ ಅಪೆಕ್ಸ್ ನ್ಯಾಯಾಲಯ, ಸತ್ಯ ರಾಜುಗೆ ಬುಧವಾರದೊಳಗೆ ನ್ಯಾಯಾಲಯಕ್ಕೆ ಶರಣಾಗುವಂತೆ ಗಡುವು ನೀಡಿ ಆದೇಶ ಹೊರಡಿಸಿತ್ತು. ಜಾಮೀನು ವಿಸ್ತರಿಸುವಂತೆ ರಾಜು ಕೋರಿದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು.
ಇದಕ್ಕಿಂತ ಮೊದಲು ರಾಜು ಪರ ವಕೀಲರಾದ ಭರತ್ ಕುಮಾರ್ ಮಾತನಾಡಿ, ತಮ್ಮ ಕಕ್ಷಿದಾರನ ಆರೋಗ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನ್ಯಾಯಾಲಯಕ್ಕೆ ಜಾಮೀನು ಅರ್ಜಿಯನ್ನು ಸಲ್ಲಿಸಲಾಗುವುದು ಎಂದು ಹೇಳಿಕೆ ನೀಡಿದ್ದಾರೆ.
ಕಕ್ಷಿದಾರ ಬಿ.ರಾಮಲಿಂಗಾ ರಾಜು ಆರೋಗ್ಯ ಸ್ಥಿತಿಯಲ್ಲಿ ಏರುಪೇರಾದಲ್ಲಿ, ನ್ಯಾಯಾಲಯದಿಂದ ಸೂಕ್ತ ಆದೇಶಗಳನ್ನು ಪಡೆಯುವುದಾಗಿ ತಿಳಿಸಿದ್ದಾರೆ.
ಸರ್ವೋಚ್ಚ ನ್ಯಾಯಾಲಯ, ಅಕ್ಚೋಬರ್ 26 ರಂದು ಆಂಧ್ರಪ್ರದೇಶದ ಹೈಕೋರ್ಟ್ ನೀಡಿದ ಜಾಮೀನು ಆದೇಶವನ್ನು ರದ್ದುಗೊಳಿಸಿ,,ಸತ್ಯಂ ಸಂಸ್ಥಾಪಕ ರಾಜು ಮತ್ತು ಅವರ ಸಹೋದರ ಬಿ.ರಾಮಾ ರಾಜು ಸೇರಿದಂತೆ ಇತರ ನಾಲ್ಕು ಆರೋಪಿಗಳಿಗೆ ನವೆಂಬರ್ 10 ರೊಳಗೆ ನ್ಯಾಯಾಲಯಕ್ಕೆ ಶರಣಾಗುವಂತೆ ಆದೇಶಿಸಿತ್ತು.
ಹೈದ್ರಾಬಾದ್‌ನ ವಿಶೇಷ ನ್ಯಾಯಾಲಯ ಮುಂಬರುವ ಜುಲೈ 2011ರೊಳಗೆ ಪ್ರಕರಣವನ್ನು ಅಂತ್ಯಗೊಳಿಸುವಂತೆ, ಸರ್ವೋಚ್ಚ ನ್ಯಾಯಾಲಯ ನಿರ್ದೇಶನ ನೀಡಿದೆ.