ಅಂತರ್ಜಾಲ ಸರ್ಚ್ ಇಂಜಿನ್ ದೈತ್ಯ ಸಂಸ್ಥೆ ಗೂಗಲ್, ಮುಂದಿನ ವರ್ಷದ ಆರಂಭದಿಂದ ಸಂಸ್ಥೆಯ ವಿಶ್ವದಾದ್ಯಂತವಿರುವ ಎಲ್ಲಾ 23 ಸಾವಿರ ಸಿಬ್ಬಂದಿಗಳಿಗೆ ಶೇ.10ರಷ್ಟು ವೇತನ ಹೆಚ್ಚಳ ಘೋಷಿಸಲು ಚಿಂತನೆ ನಡೆಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಗೂಗಲ್ ಕಂಪೆನಿ ಪ್ರತಿಸ್ಪರ್ಧಿ ಕಂಪೆನಿಗಳಿಂದ ಭಾರಿ ಪೈಪೋಟಿಯನ್ನು ಎದುರಿಸುತ್ತಿದೆ. ವಿಶೇಷವಾಗಿ ಫೇಸ್‌ಬುಕ್ ಇಂಕ್ ಕಂಪೆನಿಯಿಂದ ತೀವ್ರತೆರನಾದ ಸ್ಪರ್ಧೆಯನ್ನು ಎದುರಿಸುತ್ತಿದೆ. ಫೇಸ್‌ಬುಕ್‌ನ ಶೇ.10ರಷ್ಟು ಉದ್ಯೋಗಿಗಳು ಗೂಗಲ್ ಕಂಪೆನಿಯ ಮಾಜಿ ಸಿಬ್ಬಂದಿಗಳು.
ಗೂಗಲ್ ಅಡಳಿತ ಮಂಡಳಿಗೆ ಆತ್ಮಿಯವಾಗಿರುವ ವಾಲ್‌ಸ್ಟ್ರೀಟ್ ಜರ್ನಲ್, ಗೂಗಲ್ ಕಂಪೆನಿ ಸಿಬ್ಬಂದಿಗಳಿಗೆ ಶೇ.10ರಷ್ಟು ವೇತನ ಹೆಚ್ಚಳ ಘೋಷಿಸಲು ನಿರ್ಧರಿಸಿದೆ ಎಂದು ಹೇಳಿಕೆ ನೀಡಿದೆ.
ಮುಂದಿನ ಜನವೆರಿಯಿಂದ ಸಿಬ್ಬಂದಿಗಳ ವೇತನವನ್ನು ಹೆಚ್ಚಿಸಲಾಗುವುದು ಎಂದು ಗೂಗಲ್ ಕಂಪೆನಿಯ ಅನಾಮಧೇಯ ಅಧಿಕಾರಿಗಳು ತಿಳಿಸಿದ್ದಾರೆ.
ಗೂಗಲ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎರಿಕ್ ಶಿಮಿಡ್ಟ್, ಸಿಬ್ಬಂದಿಗಳಿಗೆ ಇ-ಮೇಲ್ ಸಂದೇಶವನ್ನು ರವಾನಿಸಿ, ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಕೊಡುಗೆ ನೀಡಲಾಗುವುದು. ಪ್ರತಿಭಾವಂತರನ್ನು ಆಕರ್ಷಿಸುವ ನೀತಿಗೆ ಸಂಸ್ಥೆ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
ಯಾವುದೇ ಕಂಪೆನಿಯ ಸಿಬ್ಬಂದಿಗಳಿಗೆ ಬೋನಸ್ ಮತ್ತು ಶೇರುಪಾಲನ್ನು ನೀಡುವುದಕ್ಕಿಂತ ಮುಖ್ಯವಾಗಿ ವೇತನ ಹೆಚ್ಚಳದ ಅಗತ್ಯವಿರುತ್ತದೆ. ವೇತನ ಹೆಚ್ಚಳದ ಜೊತೆಗೆ ಮೂಲ ವೇತನವನ್ನು ಆಧರಿಸಿ ಬೋನಸ್ ನೀಡಲು ನಿರ್ಧರಿಸಲಾಗಿದೆ ಎಂದು ಎರಿಕ್ ಅಭಿಪ್ರಾಯಪಟ್ಟಿದ್ದಾರೆ.