ಜಗತ್ತಿನ ಕಡಿಮೆ ದರದ ಖ್ಯಾತಿಯ ನ್ಯಾನೋ ಕಾರು, ಇದೀಗ ಗ್ರಾಹಕರ ಆತಂಕಕ್ಕೆ ಕಾರಣವಾಗಿದೆ. ಕೆಲ ಪ್ರಕರಣಗಳಲ್ಲಿ ಕಾರಿಗೆ ಅಕಸ್ಮಿಕ ಬೆಂತಿ ಹೊತ್ತುಕೊಂಡ ವರದಿಗಳು ಬಹಿರಂಗವಾಗುತ್ತಿದ್ದಂತೆ, ಕಾರಿಗೆ ಬೆಂಕಿ ತಡೆ ತಂತ್ರಜ್ಞಾನವನ್ನು ಅಳವಡಿಸಲು ನ್ಯಾನೋ ಕಾರುಗಳನ್ನು ವಾಪಸ್ ಕರೆಸಿಕೊಳ್ಳಲು ಟಾಟಾ ಮೋಟಾರ್ಸ್ ನಿರ್ಧರಿಸಿದೆ.
"ಹೌದು, ನ್ಯಾನೋ ಕಾರುಗಳನ್ನು ವಾಪಸ್ ಕರೆಸಿಕೊಳ್ಳುವ ಕುರಿತಂತೆ ಗ್ರಾಹಕರಿಗೆ ಮಾಹಿತಿ ನೀಡಲಾಗಿದೆ.ಕೆಲವು ನ್ಯಾನೋ ಕಾರುಗಳನ್ನು ಈಗಾಗಲೇ ವಾಪಸ್ ಕರೆಸಿಕೊಳ್ಳಲಾಗಿದೆ ಎಂದು ಟಾಟಾ ಮೋಟಾರ್ಸ್ ವ್ಯವಸ್ಥಾಪಕ ನಿರ್ದೇಶಕ(ಭಾರತೀಯ ಕಾರ್ಯಾಚರಣೆ)ಪಿ.ಎಂ.ತೆಲಂಗ್ ಹೇಳಿದ್ದಾರೆ.
ಪ್ರಸ್ತುತ ದೇಶದಲ್ಲಿ 70 ,000 ನ್ಯಾನೋ ಕಾರುಗಳನ್ನು ಗ್ರಾಹಕರು ಖರೀದಿಸಿದ್ದು, ಎಲ್ಲಾ ಕಾರುಗಳನ್ನು ವಾಪಸ್ ಕರೆಸಿಕೊಳ್ಳಲಾಗುತ್ತದೇಯೋ ಎನ್ನುವ ಕಂಪೆನಿಯ ನಿಲುವಿನ ಬಗ್ಗೆ ತಮಗೆ ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ ಎಂದು ತಿಳಿಸಿದ್ದಾರೆ.
ಕಾರಿಗೆ ಅಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿರುವ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ, ಕಾರಿಗೆ ಹೆಚ್ಚುವರಿಯಾಗಿ ಬೆಂಕಿ ತಡೆ ತಂತ್ರಜ್ಞಾನವನ್ನು ಅಳವಡಿಸಲು ಯೋಜನೆಗಳನ್ನು ರೂಪಿಸಲಾಗಿದೆ ಎಂದು ಟಾಟಾ ಮೋಟಾರ್ಸ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕ ಕಾರ್ಲ್-ಪೀಟರ್ ಫೋರೆಸ್ಟರ್ ವಿವರಣೆ ನೀಡಿದ್ದಾರೆ.