ಬೆಲೆಯೇರಿಕೆ ಬಹುತೇಕ ಆಹಾರ ವಸ್ತುಗಳಿಗೆ ಮಿತಿಯಾದ ಪರಿಣಾಮ ಸತತ ಎರಡನೇ ತಿಂಗಳಲ್ಲಿ ಹಣದುಬ್ಬರ ಕುಸಿತ ಕಂಡಿದೆ. ಅಕ್ಟೋಬರ್ ತಿಂಗಳ ಹಣದುಬ್ಬರ ಪ್ರಮಾಣವನ್ನು ಸೋಮವಾರ ಬಿಡುಗಡೆ ಮಾಡಲಾಗಿದ್ದು, ಶೇ.8.58ರಲ್ಲಿದೆ ಎಂದು ವರದಿಗಳು ಹೇಳಿವೆ.
ಸೆಪ್ಟೆಂಬರ್ ತಿಂಗಳ ಹಣದುಬ್ಬರ ಶೇ.8.62ರಲ್ಲಿತ್ತು. ಇದು ಅಕ್ಟೋಬರ್ ತಿಂಗಳಿಗಾಗುವಾಗ ಶೇ.0.04ರಷ್ಟು ಕುಸಿತ ಕಂಡಿರುವುದು ಮಹತ್ವದ್ದು ಎಂದು ಪರಿಗಣಿಸಲಾಗಿದೆ. ಕಳೆದ ವರ್ಷ ಈ ತಿಂಗಳಲ್ಲಿ ಹಣದುಬ್ಬರ ಪ್ರಮಾಣ ಶೇ.1.48ರಲ್ಲಿತ್ತು.
ಕಳೆದ ತಿಂಗಳು ಆಹಾರ ಹಣದುಬ್ಬರ ಶೇ.15.71ರಲ್ಲಿದ್ದ ಹೊರತಾಗಿಯೂ ಈ ಬಾರಿ ಇದು ಶೇ.14.13ಕ್ಕೆ ತಲುಪಿದೆ. ಉತ್ಪಾದನಾ ವಿಭಾಗದಲ್ಲಿನ ವಸ್ತುಗಳ ಹಣದುಬ್ಬರ ಪ್ರಮಾಣವು ಶೇ.4.75ಕ್ಕೆ ತಲುಪಿದೆ. ಸೆಪ್ಟೆಂಬರ್ ತಿಂಗಳಿಗೆ (ಶೇ.4.59) ಹೋಲಿಸಿದರೆ ಇದರಲ್ಲಿ ಹೆಚ್ಚಳ ಕಂಡು ಬಂದಿದೆ.
ಅಕ್ಟೋಬರ್ ತಿಂಗಳಲ್ಲಿ ಬಹುತೇಕ ಆಹಾರ ವಸ್ತುಗಳು ಬೆಲೆಯನ್ನು ಇಳಿಸಿಕೊಂಡಿವೆ ಅಥವಾ ಹೆಚ್ಚಿನ ಏರಿಕೆಗೆ ಮುಂದಾಗಿಲ್ಲ. ಆದರೆ ಈರುಳ್ಳಿ ಬೆಲೆಯಲ್ಲಿ ಮಾತ್ರ ಭಾರೀ ಹೆಚ್ಚಳವಾಗಿದೆ. ಮಹಾರಾಷ್ಟ್ರ ಮುಂತಾದೆಡೆ ಭಾರೀ ಮಳೆಯಿಂದಾಗಿ ಹಾನಿಯಾದ ಪರಿಣಾಮ ಈರುಳ್ಳಿ ಬೆಲೆ ಶೇ.24.07ರಷ್ಟು ಏರಿಕೆ ಕಂಡಿದೆ.