ತೀವ್ರ ವಿವಾದಕ್ಕೆ ತುತ್ತಾಗಿ ಕೇಂದ್ರ ದೂರಸಂಪರ್ಕ ಸಚಿವ ಎ. ರಾಜಾ ರಾಜೀನಾಮೆಗೆ ಕಾರಣವಾಗಿರುವ 2ಜಿ ತರಂಗಾಂತರ ಹಂಚಿಕೆ ಹಗರಣ ಕುರಿತ ಮಹಾ ಲೆಕ್ಕಪರಿಶೋಧಕರ ವರದಿಯನ್ನು ಸರಕಾರ ಮಂಗಳವಾರ ಸಂಸತ್ತಿನಲ್ಲಿ ಮಂಡಿಸಿದೆ.
ಬಹುಕೋಟಿ ಹಗರಣದ ಕುರಿತು ಜಂಟಿ ಸದನ ಸಮಿತಿ ತನಿಖೆ ನಡೆಸಬೇಕು ಎಂದು ಕಳೆದ ಕೆಲವು ದಿನಗಳಿಂದ ಸಂಸತ್ತಿನಲ್ಲಿ ಗದ್ದಲ ಎಬ್ಬಿಸುತ್ತಿರುವ ವಿಪಕ್ಷಗಳ ಬೇಡಿಕೆಗಳ ಹೊರತಾಗಿಯೂ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ವರದಿಯನ್ನು ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಮಂಡಿಸಿದೆ.
ಲೋಕಸಭೆಯಲ್ಲಿ ಸಿಎಜಿ ವರದಿಯನ್ನು ಮಂಡಿಸಿದ್ದು ಡಿಎಂಕೆ ಸಂಸದ ಹಾಗೂ ಹಣಕಾಸು ಖಾತೆಯ ರಾಜ್ಯ ಸಚಿವ ಎಸ್.ಎಸ್. ಪಳನಿಮಾಣಿಕಂ. ರಾಜ್ಯಸಭೆಯಲ್ಲಿ ಅವರ ಸಚಿವ ಸಹಪಾಠಿ ನಾರಾಯಣ್ ಮೀನಾ ಮಂಡಿಸಿದರು.
ವರದಿ ಮಂಡನೆಯಾಗುವ ಹೊತ್ತಿನಲ್ಲಿ ಲೋಕಸಭಾ ಸದಸ್ಯರಾಗಿರುವ ಮಾಜಿ ಸಚಿವ ರಾಜಾ ಸದನದಲ್ಲಿರಲಿಲ್ಲ. ಪ್ರತಿಪಕ್ಷಗಳು ಹಗರಣದ ಜೆಪಿಸಿ ತನಿಖೆಗೆ ಒತ್ತಾಯಿಸುವ ಪಟ್ಟು ಸಡಿಲಿಸದ ಹಿನ್ನೆಲೆಯಲ್ಲಿ ಕೋಲಾಹಲವನ್ನು ನಿಯಂತ್ರಿಸಲು ವಿಫಲರಾದ ಉಭಯ ಸದನಗಳ ಸ್ಪೀಕರುಗಳು ಕಲಾಪವನ್ನು ಗುರುವಾರಕ್ಕೆ ಮುಂದೂಡಿದರು.
2008ರಲ್ಲಿ 2ಜಿ ತರಂಗಾಂತರ ಹಂಚಿಕೆಯನ್ನು ಹರಾಜು ನಡೆಸದೆ ವಿತರಣೆ ಮಾಡಿರುವುದರಿಂದ ಸರಕಾರದ ಬೊಕ್ಕಸಕ್ಕೆ 1.76 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಸಿಎಜಿ ವರದಿಯಲ್ಲಿ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.
2008ರಲ್ಲಿ ವಿತರಿಸಲಾಗಿದ್ದ 122 ಪರವಾನಗಿಗಳಲ್ಲಿ 85 ಪರವಾನಗಿಗಳನ್ನು ಪಡೆದುಕೊಂಡಿರುವ ಕಂಪನಿಗಳು ಮೂಲ ಅರ್ಹತಾ ಮಾನದಂಡಗಳನ್ನು ಹೊಂದಿರಲಿಲ್ಲ ಎಂದು ಸಿಎಜಿ ವರದಿಯಲ್ಲಿ ಬೆಟ್ಟು ಮಾಡಿ ತೋರಿಸಲಾಗಿದೆ.
ಅಷ್ಟೇ ಅಲ್ಲದೆ ದೂರಸಂಪರ್ಕ ಸಚಿವ ಎ. ರಾಜಾ ಅವರು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ನೀಡಿದ ಸಲಹೆಗಳನ್ನು ಕೂಡ ನಿರ್ಲಕ್ಷಿಸಿದ್ದರು. 2001ರಲ್ಲಿ ನಿಗದಿಪಡಿಸಲಾಗಿದ್ದ ಹಳೆಯ ಪ್ರವೇಶ ಶುಲ್ಕವನ್ನು ಮರು ಪರಿಷ್ಕರಿಸದೆ ಕೆಲವು ನೂತನ ಸೇವಾದಾರರಿಗೆ ತರಂಗಾಂತರ ಹಂಚಿಕೆ ಮಾಡಿರುವುದನ್ನು ರಾಜಾ ಸಮರ್ಥಿಸಿದ್ದರು. ಜತೆಗೆ ತರಂಗಾಂತರ ಹಂಚಿಕೆ ದರಗಳನ್ನು ಸಚಿವರ ಸಮೂಹದ ವ್ಯಾಪ್ತಿಗೆ ಸಿಗದಂತೆ ದೂರಸಂಪರ್ಕ ಇಲಾಖೆ (ಡಾಟ್) ನೋಡಿಕೊಂಡಿತ್ತು ಎಂದು ಸಿಎಜಿ ವರದಿ ಹೇಳಿದೆ.