ತಾನು ವಿಮಾನಯಾನ ಸಂಸ್ಥೆಯನ್ನು ಹುಟ್ಟು ಹಾಕಲು ಮುಂದಾಗಿದ್ದಾಗ ಸಚಿವರೊಬ್ಬರು ಲಂಚ ಕೇಳಿದ್ದರು ಎಂಬ ಉದ್ಯಮಿ ರತನ್ ಟಾಟಾ ಹೇಳಿಕೆಗೆ ಅಚ್ಚರಿ ವ್ಯಕ್ತಪಡಿಸಿರುವ ಕೇಂದ್ರ ನಾಗರಿಕ ವಾಯುಯಾನ ಸಚಿವ ಪ್ರಫುಲ್ ಪಟೇಲ್, ವಿಮಾನಯಾನ ಸಂಸ್ಥೆ ಆರಂಭಿಸಲು ಟಾಟಾ ಸಮೂಹಕ್ಕೆ ಆಹ್ವಾನ ನೀಡಿದ್ದಾರೆ.
ತಾನು ದಶಕಗಳ ಹಿಂದೆ ವಿಮಾನಯಾನ ಸಂಸ್ಥೆಯನ್ನು ಹುಟ್ಟು ಹಾಕಲು ಬಯಸಿದ್ದೆ. ಈ ಸಂಬಂಧ ಮೂವರು ಪ್ರಧಾನ ಮಂತ್ರಿಗಳನ್ನು ಭೇಟಿಯಾಗಿದ್ದೆ. ಆದರೆ ಸಚಿವರೊಬ್ಬರ ಕಾರಣದಿಂದ ಅದು ಸಾಧ್ಯವಾಗಿರಲಿಲ್ಲ. ಅವರು 15 ಕೋಟಿ ರೂಪಾಯಿ ಲಂಚ ಕೇಳಿದ್ದರು ಎಂದು ಕೆಲ ದಿನಗಳ ಹಿಂದಷ್ಟೇ ಟಾಟಾ ಆರೋಪಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಪಟೇಲ್, ಟಾಟಾ ಅವರಿಗೆ ಇಂತಹ ಕೆಟ್ಟ ಅನುಭವವಾಗಿರುವುದು ನಿಜಕ್ಕೂ ದುರದೃಷ್ಟಕರ; ಆದರೆ ಈಗ ನಾಗರಿಕ ವಾಯುಯಾನ ಸಚಿವಾಲಯವೇ ಟಾಟಾ ಅವರನ್ನು ವಿಮಾನಯಾನ ಸಂಸ್ಥೆ ಆರಂಭಿಸುವಂತೆ ಆಹ್ವಾನಿಸುತ್ತಿದೆ. ಟಾಟಾ ನಾಗರಿಕ ಸೇವಾ ವಲಯಕ್ಕೆ ಬರುವುದಾದರೆ ಅದನ್ನು ಪ್ರಾಮಾಣಿಕವಾಗಿ ಪರಿಗಣಿಸಲು ನಾವು ಸಿದ್ಧರಿದ್ದೇವೆ ಎಂದಿದ್ದಾರೆ.
ರತನ್ ಟಾಟಾ ನೀಡಿದ್ದ ಹೇಳಿಕೆ ಸರಕಾರ ಮತ್ತು ಉದ್ಯಮ ವಲಯದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿತ್ತು. ಆ ಅವಧಿಯಲ್ಲಿ ವಾಯುಯಾನ ಸಚಿವರಾಗಿದ್ದ ಸಿ.ಎಂ. ಇಬ್ರಾಹಿಂ ಅವರಂತೂ ಆರೋಪಿತ ಸಚಿವರ ಹೆಸರು ಹೇಳದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು.
ಕಳಂಕಿತ ಸಚಿವರು ಯಾರು ಎಂಬುದನ್ನು ಬಹಿರಂಗಪಡಿಸಬೇಕು ಎಂದು ಬಿಜೆಪಿ ಕೂಡ ಆಗ್ರಹಿಸಿತ್ತು. ಆದರೆ ಮೊದಲ ಹೇಳಿಕೆಯ ನಂತರ ಟಾಟಾ ಯಾವುದೇ ಪ್ರತಿಕ್ರಿಯೆಗಳನ್ನು ನೀಡಿಲ್ಲ.
ಇದೀಗ ಸ್ವತಃ ವಾಯುಯಾನ ಸಚಿವ ಪಟೇಲ್ ವಿಮಾನಯಾನ ಸಂಸ್ಥೆಯನ್ನು ಹುಟ್ಟು ಹಾಕುವಂತೆ ಆಹ್ವಾನ ನೀಡಿರುವುದಕ್ಕೆ ಟಾಟಾ ಪ್ರತಿಕ್ರಿಯೆ ನೀಡುವರೇ ಎಂಬುದನ್ನು ಕಾದು ನೋಡಬೇಕಿದೆ.