ಅಕ್ಕಿ ರಫ್ತಿನಲ್ಲಿ ಅವ್ಯವಹಾರ: ಕೊನೆಗೂ ಒಪ್ಪಿಕೊಂಡ ಕೇಂದ್ರ
ನವದೆಹಲಿ, ಶನಿವಾರ, 20 ನವೆಂಬರ್ 2010( 16:10 IST )
ಯುಪಿಎ ಆಡಳಿತದ ಮೊದಲ ಅವಧಿಯಲ್ಲಿ ಬಾಸ್ಮತಿಯೇತರ ಅಕ್ಕಿ ರಫ್ತಿನಲ್ಲಿ ಸಾರ್ವಜನಿಕ ಕ್ಷೇತ್ರದ ಘಟಕಗಳು ಪಾರದರ್ಶನ ವಿಧಾನಗಳನ್ನು ಅನುಸರಿಸಿಲ್ಲ ಎಂದು ಹೇಳುವ ಮೂಲಕ ಈ ವಿಚಾರದಲ್ಲಿ ಅವ್ಯವಹಾರ ನಡೆದಿರುವುದನ್ನು ಕೇಂದ್ರ ಸರಕಾರ ಒಪ್ಪಿಕೊಂಡಿದೆ.
ಕೆಲವು ಆಫ್ರಿಕನ್ ರಾಷ್ಟ್ರಗಳಿಗೆ ಬಾಸ್ಮತಿಯೇತರ ಅಕ್ಕಿಯನ್ನು ರಫ್ತು ಮಾಡುವ ಸಂದರ್ಭದಲ್ಲಿ ಸಾರ್ವಜನಿಕ ಕ್ಷೇತ್ರದ ಕೆಲವು ಕಂಪನಿಗಳು ಪಾರದರ್ಶಕ ನಡೆಯನ್ನು ಅನುಸರಿಸಿಲ್ಲ. ಈ ಸಂಬಂಧ ಅಧಿಕಾರಿಗಳಿಗೆ ನೋಟೀಸ್ ಜಾರಿಗೊಳಿಸಿದ ನಂತರ ಕೇಂದ್ರ ಜಾಗೃತ ಆಯೋಗದ ಅವಗಾಹನೆಗೆ ಪ್ರಕರಣವನ್ನು ಒಪ್ಪಿಸಲಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಆನಂದ ಶರ್ಮಾ ಲೋಕಸಭೆಗೆ ತಿಳಿಸಿದ್ದಾರೆ.
ಅಕ್ಕಿ ರಫ್ತು ಹೊಣೆ ಹೊತ್ತಿದ್ದ ಪಿಎಸ್‌ಯುಗಳು ತಮ್ಮ ಸಹವರ್ತಿಗಳ ಆಯ್ಕೆ ಮತ್ತು ಅಕ್ಕಿ ರಫ್ತು ದರ ನಿಗದಿ ಪ್ರಕ್ರಿಯೆಯಲ್ಲಿ ಪಾರದರ್ಶಕ ವಿಧಾನವನ್ನು ಅನುಸರಿಸಿರಲಿಲ್ಲ ಎನ್ನುವುದು ವಾಣಿಜ್ಯ ಸಚಿವಾಲಯವು ನಡೆಸಿದ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಬಳಿಕ ಸಿವಿಸಿಗೆ ಪ್ರಕರಣವನ್ನು ಒಪ್ಪಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಈ ಹಿಂದೆ ಕಮಲನಾಥ್ ಅವರು ವಾಣಿಜ್ಯ ಖಾತೆಯ ಹೊಣೆ ಹೊತ್ತಿದ್ದ ಸಂದರ್ಭದಲ್ಲಿ ಬಾಸ್ಮತಿಯೇತರ ಅಕ್ಕಿ ರಫ್ತಿನಲ್ಲಿ ಅವ್ಯವಹಾರ ನಡೆದಿತ್ತು.
ದೇಶೀಯ ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆ ಮಿತಿ ಮೀರಿ ಏರಿಕೆಯಾಗಿದ್ದ ನಿಟ್ಟಿನಲ್ಲಿ ಸರಕಾರವು ಬಾಸ್ಮತಿಯೇತರ ಅಕ್ಕಿ ರಫ್ತನ್ನು ನಿಷೇಧಿಸಿತ್ತು. ಆದರೆ ಒಪ್ಪಂದಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಆಫ್ರಿಕಾದ ಕೆಲವು ರಾಷ್ಟ್ರಗಳು ಮತ್ತು ಇತರ ಹಿಂದುಳಿದ ರಾಷ್ಟ್ರಗಳಿಗೆ ಸೀಮಿತ ಪ್ರಮಾಣದಲ್ಲಿ ಅಕ್ಕಿ ರಫ್ತಿಗೆ ಅವಕಾಶ ನೀಡಲಾಗಿತ್ತು.
ಇದನ್ನೇ ಬಂಡವಾಳ ಮಾಡಿಕೊಂಡಿದ್ದ ವಿದೇಶಿ ಖರೀದಿದಾರರು ಮತ್ತು ದೇಶೀಯ ಪೂರೈಕೆದಾರರು, ಭಾರೀ ಲಾಭ ಮಾಡಿಕೊಂಡಿದ್ದರು. ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಸಚಿವರು ಲೋಕಸಭೆಗೆ ಮಾಹಿತಿ ನೀಡಿದರು.