ಮೊಬೈಲ್ ಬಳಕೆದಾರರು ಮೊಬೈಲ್ ಆಪರೇಟರ್‌ಗಳನ್ನು ಬದಲಾಯಿಸಿ ಹಳೆಯ ಸಂಖ್ಯೆಯನ್ನು ಪಡೆಯುವ ಬಹುನಿರೀಕ್ಷಿತ ಮೊಬೈಲ್ ನಂಬರ್ ಪೋರ್ಟೆಬಿಲಿಟಿ(ಎಂಎನ್‌ಪಿ) ಸೌಲಭ್ಯ, ಹರಿಯಾಣಾದ ರೋಹಟಕ್ ಜಿಲ್ಲೆಯಲ್ಲಿ ಗುರುವಾರದಿಂದ ಆರಂಭವಾಗಲಿದೆ.
ದೇಶದ ಇತರ ವಲಯಗಳಿಗೆ ನಿಧಾನವಾಗಿ ವಿಸ್ತರಿಸಲಾಗುವುದು. ಮೊಬೈಲ್ ನಂಬರ್ ಪೋರ್ಟೆಬಿಲಿಟಿ, ಈಗಾಗಲೇ ಹಲವಾರು ಬಾರಿ ಜಾರಿಯಾಗುವಲ್ಲಿ ವಿಳಂಬವಾಗಿದೆ ಎಂದು ಟೆಲಿಕಾಂ ಇಲಾಖೆ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಆರಂಭಿಕ ಹಂತದಲ್ಲಿ, ಮಹಾರಾಷ್ಟ್ರ, ಗುಜರಾತ್, ಆಂಧ್ರಪ್ರದೇಶ, ಕರ್ನಾಟಕ ಮತ್ತು ತಮಿಳು ನಾಡು ರಾಜ್ಯಗಳು ಸೇರಿದಂತೆ ದೇಶದ ಎಲ್ಲಾ ಮೆಟ್ರೋ ನಗರಗಳಲ್ಲಿ ಡಿಸೆಂಬರ್ 31, 2009ರಂದು ಮೊಬೈಲ್ ನಂಬರ್ ಪೋರ್ಟೆಬಿಲಿಟಿ ಜಾರಿಗೊಳಿಸಲಾಗುವುದು ಎಂದು ಟೆಲಿಕಾಂ ಇಲಾಖೆ ಘೋಷಿಸಿತ್ತು. ನಂತರ ಮಾರ್ಚ್ 31,2010ಕ್ಕೆ ವಿಸ್ತರಿಸಲಾಗಿತ್ತು.ಮತ್ತೆ ಜೂನ್ 30ಕ್ಕೆ ಜಾರಿಯಾಗುವುದಾಗಿ ಹೇಳಿಕೆ ನೀಡಿತ್ತು.
ಮೊಬೈಲ್ ಆಪರೇಟರ್‌ಗಳು ಮೂಲಸೌಕರ್ಯಗಳ ಕೊರತೆಯಿಂದಾಗಿ, ಮೊಬೈಲ್ ನಂಬರ್ ಪೋರ್ಟೆಬಿಲಿಟಿ ಸೌಲಭ್ಯ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಟೆಲಿಕಾಂ ಕಂಪೆನಿಗಳು ಅಸಹಾಯಕತೆಯನ್ನು ವ್ಯಕ್ತಪಡಿಸಿದ ನಂತರ ಮತ್ತೆ ಮುಂದೂಡಲಾಗಿತ್ತು.
ಮೊಬೈಲ್ ಬಳಕೆದಾರರು, 1900 ಸಂಖ್ಯೆಗೆ ಎಸ್‌ಎಂಎಸ್ ಸಂದೇಶವನ್ನು ಕಳುಹಿಸಬೇಕು. ಸಂದೇಶ ತಲುಪಿದ ನಂತರ ಟೆಲಿಕಾಂ ಕಂಪೆನಿಗಳು ಯುನಿಕ್ ಪೋರ್ಟಿಂಗ್ ಕೋಡ್ ಸಂಖ್ಯೆಯನ್ನು ರವಾನಿಸಲಾಗುತ್ತದೆ. ನೂತನ ಮೊಬೈಲ್ ಆಪರೇಟರ್ ಸಂಸ್ಥೆಯ ಅರ್ಜಿಯಲ್ಲಿ ಕೋಡ್ ಸಂಖ್ಯೆಯನ್ನು ನಮೂದಿಸಿದಲ್ಲಿ, ಮೊಬೈಲ್ ಪೋರ್ಟೆಬಿಲಿಟಿ ಸಂಖ್ಯೆಯನ್ನು ಪಡೆಯಬಹುದಾಗಿದೆ.
ಮೊಬೈಲ್ ಸಂಖ್ಯೆಯ ವರ್ಗಾವಣೆಯನ್ನು, ನಾಲ್ಕು ದಿನಗಳೊಳಗಾಗಿ ಪಡೆಯಬಹುದಾಗಿದೆ ಎಂದು ಟೆಲಿಕಾಂ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.