2ಜ ತರಂಗಾಂತರ ಹಗರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಮಾಜಿ ಟೆಲಿಕಾಂ ಸಚಿವ ಎ.ರಾಜಾ ಅವರನ್ನು ಯಾಕೆ ಪ್ರಶ್ನಿಸಲಿಲ್ಲ ಎಂದು ಅಪೆಕ್ಸ್ ನ್ಯಾಯಾಲಯ ಸಿಬಿಐ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದೆ.
ನ್ಯಾಯಮೂರ್ತಿ ಜಿ.ಎಸ್.ಸಿಂಘಾವಿ ಮತ್ತು ಎ.ಕೆ. ಗಂಗೂಲಿ ನೇತೃತ್ವದ ಪೀಠ, ಸಿವಿಸಿ ಮತ್ತು ಸಿಎಜಿ ವರದಿಗಳಲ್ಲಿ ಮಾಜಿ ಸಚಿವ ಎ.ರಾಜಾ ಭಾಗಿಯಾಗಿದ್ದಾರೆ ಎನ್ನುವ ವರದಿಗಳ ಮಧ್ಯೆಯು ಅವರನ್ನು ತನಿಖಾ ತಂಡ ಪ್ರಶ್ನಿಸಲು ಹಿಂದೇಟು ಹಾಕಿರುವುದು ಆಶ್ಚರ್ಯ ತಂದಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಸಿಎಜಿ ಸಂವಿಧಾನದ ಅಢಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, 2ಜಿ ತರಂಗಾಂತರಗಳ ಹಗರಣದಲ್ಲಿ ಭಾಗಿಯಾದ ಪ್ರತಿಷ್ಠಿತ ವ್ಯಕ್ತಿಗಳ ಪ್ರಶ್ನಿಸದಿರುವುದಕ್ಕೆ ನಿಮ್ಮ ಮೇಲಿರುವ ಒತ್ತಡವಾದರೂ ಏನು ಎಂದು ಖಾರವಾಗಿ ಪ್ರಶ್ನಿಸಿದೆ.
2ಜಿ ತರಂಗಾಂತರ ಹಗರಣದ ತನಿಖೆ ನಡೆಸುತ್ತಿರುವ ತನಿಖಾ ತಂಡ ಈಗಾಗಲೇ 8 ಸಾವಿರ ಪುಟಗಳ ಕಡತವನ್ನು ಸಿದ್ಧಪಡಿಸಿದೆ. ಜವಾಬ್ದಾರಿಯುತ ವ್ಯಕ್ತಿಗಳನ್ನು ಪ್ರಶ್ನಿಸುವ ಬದಲು ಸಂಬಂಧವಲ್ಲದ ವ್ಯಕ್ತಿಗಳನ್ನು ಪ್ರಶ್ನಿಸಿ ದಾಖಲೆಗಳನ್ನು ಸಿದ್ಧಪಡಿಸಿ ನ್ಯಾಯಾಲಯವನ್ನು ವಂಚಿಸುತ್ತಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.