ಮಾರುಕಟ್ಟೆಗಳಿಗೆ ಆಹಾರ ಧಾನ್ಯಗಳು ಹರಿದುಬರುತ್ತಿರುವ ಹಿನ್ನೆಲೆಯಲ್ಲಿ, ತರಕಾರಿ ದರಗಳಲ್ಲಿ ಇಳಿಕೆಯಾಗಿದ್ದರಿಂದ ಆಹಾರ ಹಣದುಬ್ಬರ ದರ ವಾರಂತ್ಯಕ್ಕೆ ಶೇ.8.60ಕ್ಕೆ ಇಳಿಕೆಯಾಗಿದೆ.
ಆಹಾರ ಹಣದುಬ್ಬರ ದರ ಕಳೆದ ವಾರಂತ್ಯಕ್ಕೆ ಶೇ.10.15ಕ್ಕೆ ತಲುಪಿತ್ತು. ಇದೀಗ ಶೇ.8.60ಕ್ಕೆ ಇಳಿಕೆಯಾಗಿದೆ.
ಮುಂಗಾರು ಮಳೆ ಉತ್ತಮವಾಗಿದ್ದರಿಂದ, ಆಹಾರ ಧಾನ್ಯಗಳಲ್ಲಿ ಉತ್ಪಾದನೆ ಹೆಚ್ಚಳವಾಗಿ, ಆಹಾರ ಹಣದುಬ್ಬರ ದರ ಸತತ ಏಳನೇ ವಾರಂತ್ಯಕ್ಕೆ ಇಳಿಕೆ ಕಂಡಿದೆ.
ದ್ವಿದಳ ಧಾನ್ಯಗಳ ದರಗಳಲ್ಲಿ ಶೇ.10ರಷ್ಟು ಕುಸಿತವಾಗಿದೆ. ವಾರ್ಷಿಕ ಆಧಾರದಲ್ಲಿ ಆಲೂಗಡ್ಡೆ ದರದಲ್ಲಿ ಕುಸಿತವಾಗಿದ್ದರಿಂದ ತರಕಾರಿ ದರಗಳಲ್ಲಿ ಶೇ.3ರಷ್ಟು ಇಳಿಕೆ ಕಂಡಿದೆ.
ಏತನ್ಮಧ್ಯೆ, ಅಗತ್ಯ ಆಹಾರ ವಸ್ತುಗಳಾದ ಮೊಟ್ಟೆ,, ಮಾಂಸ ಮತ್ತು ಮೀನು ದರಗಳಲ್ಲಿ ಶೇ.15.58ರಷ್ಟು ಏರಿಕೆ ಕಂಡಿದೆ.
ವಾರ್ಷಿಕ ಆಧಾರದನ್ವಯ ಈರುಳ್ಳಿ ದರದಲ್ಲಿ ಶೇ.16.86 ರಷ್ಟು ಏರಿಕೆ ಕಂಡಿದೆ. ಭತ್ತದ ದರದಲ್ಲಿ ಕೂಡಾ ಶೇ.1.84ರಷ್ಟು ಏರಿಕೆಯಾಗಿದೆ.
ಏತನ್ಮಧ್ಯೆ, ಹಣ್ಣು ಮತ್ತು ಹಾಲು ದರಗಳಲ್ಲಿ ಕೂಡಾ ಕ್ರಮವಾಗಿ ವಾರ್ಷಿಕ ಆಧಾರದನ್ವಯ ಶೇ.19.27 ಮತ್ತು ಶೇ.17.76 ರಷ್ಟು ಏರಿಕೆಯಾಗಿದೆ.
ಆಹಾರ ಹಣದುಬ್ಬರ ದರ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಒಟ್ಟಾರೆ ಹಣದುಬ್ಬರ ದರ ಕೂಡಾ ಶೇ.6ಕ್ಕೆ ಇಳಿಕೆಯಾಗುವ ಸಾಧ್ಯತೆಗಳಿವೆ ಎಂದು ವಾಣಿಜ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.