ಚಿನ್ನದ ದರದಲ್ಲಿ ದಾಖಲೆಯ ಏರಿಕೆಯಾಗಿದ್ದರೂ ಭಾರತೀಯರು ಚಿನ್ನದ ಖರೀದಿಯಲ್ಲಿ ಹಿಂದೆ ಬಿದ್ದಿಲ್ಲ.ಶೇರುಪೇಟೆಯ ತೊಳಲಾಟದ ವಹಿವಾಟಿನಿಂದಾಗಿ ಹೂಡಿಕೆದಾರರು ಸುರಕ್ಷಿತ ಠೇವಣಿಯಾದ ಚಿನ್ನದ ಖರೀದಿಯಲ್ಲಿ ತೊಡಗಿದ್ದರಿಂದ, ಚಿನ್ನದ ಖರೀದಿಯಲ್ಲಿ ಶೇ.113ರಷ್ಟು ಏರಿಕೆಯಾಗಿದೆ ಎಂದು ಚಿನಿವಾರಪೇಟೆಯ ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಕಳೆದ ಮೂರು ವರ್ಷಗಳ ಅವಧಿಯಲ್ಲಿ ಜಾಗತಿಕ ಆರ್ಥಿಕ ಕುಸಿತದಿಂದಾಗಿ ಶೇರುಪೇಟೆಗಳ ತೊಳಲಾಟದಿಂದಾಗಿ ಹೂಡಿಕೆ ಮಾಡಲು ಹೂಡಿಕೆದಾರರು ನಿರಾಸಕ್ತಿಯನ್ನು ತೋರುತ್ತಿದ್ದಾರೆ.ಆದರೆ, ಸುರಕ್ಷಿತ ಠೇವಣಿಯಾಗಿ ಚಿನ್ನವನ್ನು ಪರಿಗಣಿಸಿದ್ದರಿಂದ ಚಿನ್ನದ ಖರೀದಿಯಲ್ಲಿ ಹೆಚ್ಚಳವಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
2010ರ ನವೆಂಬರ್ ಅಂತ್ಯದವರೆಗೆ ಭಾರತೀಯರು 353 ಟನ್ ಚಿನ್ನವನ್ನು ಖರೀದಿಸಿದ್ದಾರೆ. 2007ರ ನವೆಂಬರ್ ಅಂತ್ಯದ ಅವಧಿಯವರೆಗೆ 168ಟನ್ ಚಿನ್ನವನ್ನು ಗ್ರಾಹಕರು ಖರೀದಿಸಿದ್ದರು ಎಂದು ಚಿನಿವಾರಪೇಟೆಯ ವರ್ತಕರು ತಿಳಿಸಿದ್ದಾರೆ.
ದೇಶದ ಚಿನ್ನದ ಬೇಡಿಕೆ ರೂಪಾಯಿ ಮೌಲ್ಯದಲ್ಲಿ ಹೇಳಬಹುದಾದರೆ 53,196 ಕೋಟಿ ರೂಪಾಯಿಗಳಿಂದ ಶೇ.113ರಷ್ಟು ಹೆಚ್ಚಳವಾಗಿ 1,13,302 ಕೋಟಿ ರೂಪಾಯಿಗಳಿಗೆ ತಲುಪಿದೆ.