ನವದೆಹಲಿ: ಈಗಾಗಲೇ ತಿಂದುಂಡು ಬದುಕಲು ಬೇಕಾಗಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯನಿಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ವರ್ಷಾಂತ್ಯದ ಮತ್ತೊಂದು ಕೊಡುಗೆ ನೀಡಿದೆ. ಇಂಧನ ಬೆಲೆಗಳ ನಿಯಂತ್ರಣವನ್ನು ತೈಲ ವಿತರಣಾ ಕಂಪನಿಗಳಿಗೇ ಒಪ್ಪಿಸಿದ ಪರಿಣಾಮವು ಜನ ಸಾಮಾನ್ಯರ ಮೇಲೆ ತಟ್ಟತೊಡಗಿದ್ದು, ಮಂಗಳವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಭಾರತ್ ಪೆಟ್ರೋಲಿಯಂ ಕಂಪನಿಯು ಪೆಟ್ರೋಲ್ ಬೆಲೆಯನ್ನು ಲೀಟರಿಗೆ 2.96 ರೂ. ಹೆಚ್ಚಿಸಿದ್ದು, ಉಳಿದ ತೈಲ ಕಂಪನಿಗಳೂ ಬೆಲೆ ಏರಿಕೆಯನ್ನು ಬುಧವಾರ ಘೋಷಿಸಲಿವೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರೆಲ್ ಒಂದರ ಬೆಲೆಯು 90 ಡಾಲರ್‌ಗೆ ಏರಿಕೆಯಾದ ಹಿನ್ನೆಲೆಯಲ್ಲಿ ಈ ಬೆಲೆ ಏರಿಕೆ ಘೋಷಣೆಯಾಗಿದೆ ಎಂದು ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿ. (ಬಿಪಿಸಿಎಲ್) ಹೇಳಿಕೊಂಡಿದೆ.
ಇಂಡಿಯನ್ ಆಯಿಲ್ ಕಾರ್ಪೊರೇಶನ್ (ಐಒಸಿ) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿ. (ಎಚ್‌ಪಿಸಿಎಲ್) ಕೂಡ ದರ ಏರಿಕೆ ಘೋಷಿಸಲಿವೆ.
ಪೆಟ್ರೋಲ್ ದರ ಏರಿಕೆ ಕುರಿತಂತೆ ಮಾತನಾಡಿದ ಪೆಟ್ರೋಲೀಯಂ ಖಾತೆ ಸಚಿವ ಮುರಳಿ ದೇವ್ರಾ, ಕಚ್ಚಾ ತೈಲ ದರಗಳ ಏರಿಕೆಯಿಂದಾಗಿ ಪೆಟ್ರೋಲ್ ದರದಲ್ಲಿ ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ಪ್ರತಿ ಲೀಟರ್ ಪೆಟ್ರೋಲ್ ಮಾರಾಟದಿಂದಾಗಿ ತೈಲ ಕಂಪೆನಿಗಳಿಗೆ 4.17 ರೂಪಾಯಿ ನಷ್ಟವಾಗುತ್ತಿದೆ. ಪ್ರತಿ ಲೀಟರ್ ಡೀಸೆಲ್ ಮಾರಾಟದಿಂದಾಗಿ 4.80 ರೂಪಾಯಿಗಳಷ್ಟು ನಷ್ಟವಾಗುತ್ತಿದೆ ಎಂದು ತೈಲ ಸಚಿವಾಲಯದ ಕಾರ್ಯದರ್ಶಿ ಎಸ್.ಸುಂದರೇಶನ್ ಹೇಳಿಕೆ ನೀಡಿದ್ದಾರೆ.
ಪೆಟ್ರೋಲ್ ದರ ಏರಿಕೆಯ ಅಧಿಕಾರವನ್ನು ತೈಲ ವಿತರಣಾ ಕಂಪನಿಗಳಿಗೆ ನೀಡಲಾಗಿದೆಯಾದರೂ, ಡೀಸೆಲ್ ಬೆಲೆ ಏರಿಕೆ ನಿಯಂತ್ರಣವನ್ನು ಯುಪಿಎ ಸರಕಾರ ತನ್ನ ಬಳಿಯೇ ಉಳಿಸಿಕೊಂಡಿತ್ತು. ಈಗ ಡೀಸೆಲ್ ಬೆಲೆ ಏರಿಕೆಯ ಕುರಿತಾಗಿಯೂ ಕಾಂಗ್ರೆಸ್ ನೇತೃತ್ವದ ಸರಕಾರದ ಸಚಿವರ ಮಂಡಳಿಯು ತೀರ್ಮಾನ ತೆಗೆದುಕೊಳ್ಳಲಿದೆ ಎಂಬ ಮಾಹಿತಿ ಲಭಿಸಿದ್ದು, ಜನ ಸಾಮಾನ್ಯರಿಗೆ ದಯನೀಯ ದಿನಗಳು ಮತ್ತಷ್ಟು ಯಾತನಾಮಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಕಳೆದ ಜೂನ್ ತಿಂಗಳಲ್ಲಿ ತೈಲ ಬೆಲೆಯ ನಿಯಂತ್ರಣವ ಅಧಿಕಾರವವನ್ನು ಸರಕಾರವು ತೈಲ ವಿತರಣಾ ಕಂಪನಿಗಳಿಗೇ ಹಸ್ತಾಂತರಿಸಿತ್ತು.
ಈ ಮಧ್ಯೆ, ಲಕ್ಷಾಂತರ ಕೋಟಿ ರೂಪಾಯಿ ಹಗರಣಗಳ ಹಣವನ್ನು ತೈಲ ಕಂಪನಿಗಳಿಗೋ ಅಥವಾ ಜೀವನಾವಶ್ಯಕ ಬೆಲೆಗಳ ಏರಿಕೆ ನಿಯಂತ್ರಣಕ್ಕೋ ವಿನಿಯೋಗಿಸಿದರೆ, ಜನ ಸಾಮಾನ್ಯರಾದರೂ ಬೆಲೆ ಏರಿಕೆಯ ಬಿಸಿಯಿಂದ ಸ್ವಲ್ಪಮಟ್ಟಿಗೆ ಉಸಿರಾಡಬಹುದು ಎಂಬುದು ಜನಸಾಮಾನ್ಯರ ಅಭಿಪ್ರಾಯ.