ಹಣ್ಣು, ಹಾಲು ,ತರಕಾರಿ ಮತ್ತು ಭತ್ತದ ದರಗಳ ಏರಿಕೆಯಿಂದಾಗಿ ಆಹಾರ ಹಣದುಬ್ಬರ ದರ ಡಿಸೆಂಬರ್ 4 ಕ್ಕೆ ವಾರಂತ್ಯಗೊಂಡಂತೆ ಶೇ.9.46ಕ್ಕೆ ಏರಿಕೆ ಕಂಡಿದೆ.
ಕಳೆದ ವಾರದ ಅವಧಿಯಲ್ಲಿ ಆಹಾರ ಹಣದುಬ್ಬರ ದರ ಶೇ.8.60ಕ್ಕೆ ತಲುಪಿತ್ತು. ಇದೀಗ ಸತತ ಎರಡನೇ ವಾರದ ಅವಧಿಯಲ್ಲಿ ಆಹಾರ ಹಣದುಬ್ಬರ ದರ ಏರಿಕೆ ಕಂಡಿದೆ.
ಹಣದುಬ್ಬರ ದರ ನಿಯಂತ್ರಣಕ್ಕಾಗಿ ರೆಪೋ ದರಗಳನ್ನು ಹೆಚ್ಚಸಲಿದೆ ಎನ್ನುವ ನಿರೀಕ್ಷೆಗಳಿಂದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಮಧ್ಯಂತ್ರರ ತ್ರೈಮಾಸಿಕ ಪರಿಷ್ಕರಣ ಸಭೆಗೆ ಕೇವಲ ಒಂದು ಗಂಟೆ ಮುಂಚೆ ಆಹಾರ ಹಣದುಬ್ಬರ ದರದ ಅಂಕಿ ಅಂಶಗಳು ಬಿಡುಗಡೆಯಾಗಿದೆ.
ಭತ್ತದ ದರದಲ್ಲಿ ಶೇ.1.47 ರಷ್ಟು ಏರಿಕೆಯಾಗಿದೆ. ತರಕಾರಿ ದರಗಳಲ್ಲಿ ಶೇ.1 ರಷ್ಟು ಹಾಗೂ ಹಾಲಿನ ದರದಲ್ಲಿ ಶೇ.17.76ರಷ್ಟು ಏರಿಕೆ ಕಂಡಿದೆ. ಹಣ್ಣುಗಳ ದರಗಳಲ್ಲಿ ಶೇ.19.75ರಷ್ಟು ಏರಿಕೆಯಾಗಿದೆ. ದ್ವಿದಳ ಧಾನ್ಯ ಮತ್ತು ಗೋಧಿ ದರಗಳಲ್ಲಿ ಕ್ರಮವಾಗಿ ಶೇ.4.24ರಷ್ಟು ಹಾಗೂ ಶೇ.11.46ರಷ್ಟು ಇಳಿಕೆ ಕಂಡಿದೆ.
ಹೆಚ್ಚುವರಿಯಾಗಿ, ವಾರ್ಷಿಕ ಆಧಾರದನ್ವಯ ಇಂಧನ ಮತ್ತು ವಿದ್ಯುತ್ ಉತ್ಪನ್ನಗಳ ದರಗಳ ಸೂಚ್ಯಂಕದಲ್ಲಿ ಶೇ.10.67ರಷ್ಟು ಏರಿಕೆಯಾಗಿದೆ
ಈರುಳ್ಳಿ ದರವೂ ಕೂಡಾ ಗಗನಕ್ಕೇರಿದ್ದು, ವಾರ್ಷಿಕ ಆಧಾರದನ್ವಯ ಶೇ.29.93ರಷ್ಟು ಏರಿಕೆ ಕಂಡಿದೆ ಎಂದು ವಾಣಿಜ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಏತನ್ಮಧ್ಯೆ, ಒಟ್ಟಾರೆ ಹಣದುಬ್ಬರ ದರ ನವೆಂಬರ್ ತಿಂಗಳ ಅವಧಿಯಲ್ಲಿ ಶೇ.8.58ರಿಂದ ಶೇ.7.48ಕ್ಕೆ ಇಳಿಕೆ ಕಂಡಿದೆ.