ನೆರೆಯ ರಾಷ್ಟ್ರವಾದ ಪಾಕಿಸ್ತಾನಕ್ಕೆ ಸಾವಿರಾರು ಟನ್ ಈರುಳ್ಳಿ ರಫ್ತು ಮಾಡುತ್ತಿದ್ದ ಭಾರತ, ಇದೀಗ ಪಾಕಿಸ್ತಾನದಿಂದ ಈರುಳ್ಳಿಯನ್ನು ಖರೀದಿಸುತ್ತಿರುವುದು ಶೋಚನೀಯ ಸಂಗತಿಯಾಗಿದೆ.
ದೇಶಿಯ ಈರುಳ್ಳಿ ಮಾರುಕಟ್ಟೆಗಳಲ್ಲಿ ಪ್ರತಿ ಕೆಜಿ ಈರುಳ್ಳಿ ದರ 75 ರೂಪಾಯಿಗಳಿಗೆ ಏರಿಕೆಯಾದ ಹಿನ್ನೆಲೆಯಲ್ಲಿ, ವರ್ತಕರು ಇಂತಹ ಅವಕಾಶವನ್ನು ಬಳಸಿಕೊಳ್ಳಲು ಪಾಕಿಸ್ತಾನದಿಂದ ಕಡಿಮೆ ದರದಲ್ಲಿ ಈರುಳ್ಳಿ ಅಮದು ಮಾಡಿಕೊಂಡು ಹೆಚ್ಚಿನ ದರದಲ್ಲಿ ಮಾರಾಟ ಮಾಡುವ ಹವಣಿಕೆಯಲ್ಲಿ ತೊಡಗಿದ್ದಾರೆ.
ಸೋಮವಾರದಂದು ಕೇಂದ್ರ ಸರಕಾರ, ಮುಂಬರುವ ಜನೆವರಿ 15ರ ವರೆಗೆ ಈರುಳ್ಳಿ ರಫ್ತು ನಿಷೇಧಿಸಿ ಆದೇಶ ಹೊರಡಿಸಿದೆ. ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಫೆಡರೇಶನ್ ತುರ್ತುಸಭೆಯನ್ನು ಕರೆದು ರಫ್ತು ವಹಿವಾಟಿಗೆ ನಿಷೇಧ ಹೇರಿದೆ.
ಪಾಕಿಸ್ತಾನದ ಅಟ್ಟಾರಿ-ವಾಘಾ ಗಡಿಯ ಮೂಲಕ ಈರುಳ್ಳಿಯನ್ನು ಹೊತ್ತ 12 ಟ್ರಕ್‌ಗಳು ನಗರಕ್ಕೆ ಆಗಮಿಸಿದ್ದು, ಪ್ರತಿ ಟ್ರಕ್‌ನಲ್ಲಿ 10-15 ಟನ್ ಈರುಳ್ಳಿಯನ್ನು ಹೊಂದಿದೆ. ಪ್ರತಿ ಕೆಜಿ ಈರುಳ್ಳಿಗೆ 18-20 ರೂಪಾಯಿಗಳಂತೆ ಖರೀದಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ವರ್ಷದ ಅವಧಿಯಲ್ಲಿ ಭಾರತ, ನೆರೆಯ ರಾಷ್ಟ್ರವಾದ ಪಾಕಿಸ್ತಾನಕ್ಕೆ ಸಾವಿರಾರು ಟನ್ ಈರುಳ್ಳಿಯನ್ನು ರಫ್ತು ಮಾಡಿತ್ತು. ಮಹಾರಾಷ್ಟ್ರ, ಕರ್ನಾಟಕ, ಗುಜರಾತ್ ರಾಜ್ಯಗಳಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಈರುಳ್ಳಿ ಬೆಳೆ ನಾಶವಾಗಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ತೆರಳಿದೆ.