ಕಳೆದ ವಾರ ಗಗನಕ್ಕೇರಿದ್ದ ಈರುಳ್ಳಿ ಬೆಲೆ ಈಗಾಗಲೇ ಸಾಕಷ್ಟು ಇಳಿಕೆ ಕಂಡಿದೆ, ಶೀಘ್ರದಲ್ಲೇ ನಿಯಂತ್ರಣಕ್ಕೆ ಸಿಗಲಿದೆ ಎಂದು ಹೇಳಿರುವ ಕೇಂದ್ರ ವಿತ್ತ ಸಚಿವ ಪ್ರಣಬ್ ಮುಖರ್ಜಿ, ಬೆಲೆಯೇರಿಕೆಯನ್ನು ತಡೆಗಟ್ಟುವ ಸಂಬಂಧ ಸರಕಾರ ಎಲ್ಲಾ ಪೂರಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದರು.
ಈರುಳ್ಳಿ ರಫ್ತನ್ನು ತಾತ್ಕಾಲಿಕವಾಗಿ ಸಂಪೂರ್ಣ ನಿಷೇಧಿಸಲಾಗಿದೆ. ಆಮದು ಸುಂಕವನ್ನು ಶೂನ್ಯಕ್ಕೆ ಇಳಿಕೆ ಮಾಡಲಾಗಿದೆ. ಜತೆಗೆ ವಿದೇಶಗಳಿಂದ ಆಮದು ಮಾಡಲ್ಪಟ್ಟ ನೀರುಳ್ಳಿ ಕೂಡ ನಮ್ಮ ಮಾರುಕಟ್ಟೆಗಳಿಗೆ ಬರುತ್ತಿವೆ. ಈಗಾಗಲೇ ಬೆಲೆ ಇಳಿಕೆಯಾಗಿದೆ ಎಂದು ಕೊಲ್ಕತ್ತಾದಲ್ಲಿ ತನ್ನ ನಿವಾಸದಲ್ಲಿ ಮುಖರ್ಜಿ ತಿಳಿಸಿದರು.
ಕೆಲವು ಹಣ್ಣು-ಹಂಪಲುಗಳು, ತರಕಾರಿಗಳು ಮತ್ತು ಹಾಲು ಮುಂತಾದುವುಗಳು ಎಲ್ಲಾ ಸಂದರ್ಭಗಳಲ್ಲೂ ಲಭ್ಯವಾಗುವುದಿಲ್ಲ. ಹಾಗಾಗಿ ಈ ಉತ್ಪನ್ನಗಳ ಪೂರೈಕೆ ಮತ್ತು ಬೇಡಿಕೆಯಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಆಗ ಬೆಲೆಯೇರಿಕೆ ಕಂಡು ಬರುತ್ತದೆ ಎಂದರು.
ಪೂರೈಕೆಯ ಅಭಾವದಿಂದಾಗಿ ಕಳೆದ ವಾರ ನೀರುಳ್ಳಿ ಪ್ರತಿ ಕಿಲೋವೊಂದಕ್ಕೆ 85 ರೂಪಾಯಿಗಳವರೆಗೆ ಏರಿಕೆಯಾಗಿತ್ತು.
ಇದಕ್ಕೆ ಕಾರಣವಾದದ್ದು ದೇಶದ ಪ್ರಮುಖ ಈರುಳ್ಳಿ ಬೆಳೆಯುವ ರಾಜ್ಯ ಮಹಾರಾಷ್ಟ್ರ. ಇಲ್ಲಿ ಭಾರೀ ಅಕಾಲಿಕ ಮಳೆ ಕಾಣಿಸಿಕೊಂಡ ಪರಿಣಾಮ ಬೆಳೆಗಳು ನಾಶವಾಗಿದ್ದವು. ಜತೆಗೆ ದಳ್ಳಾಲಿಗಳು ಕೂಡ ಇದಕ್ಕೆ ಕಾರಣರು ಎಂದು ಆರೋಪಿಸಲಾಗುತ್ತಿದೆ.