ಮಾರ್ಚ್ ವೇಳೆಗೆ ಹಣದುಬ್ಬರ ದರ ಶೇ.5.5ಕ್ಕೆ ಇಳಿಕೆ:ರಂಗರಾಜನ್
ಚಂಡೀಗಢ್, ಸೋಮವಾರ, 27 ಡಿಸೆಂಬರ್ 2010( 17:32 IST )
ನಿರಂತರವಾಗಿ ಏರಿಕೆ ಕಾಣಉತ್ತಿರುವ ಹಣದುಬ್ಬರ ದರ, ಮಾರ್ಚ್ ವೇಳೆಗೆ ಶೇ.5.5ಕ್ಕೆ ಇಳಿಕೆಯಾಗುವ ನಿರೀಕ್ಷೆಗಳಿವೆ ಎಂದು ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಸಮಿತಿಯ ಮುಖ್ಯಸ್ಥ ಸಿ.ರಂಗರಾಜನ್ ಹೇಳಿದ್ದಾರೆ.
ಪ್ರಸಕ್ತ ಆರ್ಥಿಕ ವರ್ಷದ ಮುಕ್ತಾಯಕ್ಕೆ ದೇಶದ ಆರ್ಥಿಕ ವೃದ್ಧಿ ದರ ಶೇ.8.5ರಿಂದ ಶೇ.9ಕ್ಕೆ ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಆರ್ಥಿಕ ಸಲಹಾ ಸಮಿತಿ ಅಭಿಪ್ರಾಯ ವ್ಯಕ್ತಪಡಿಸಿದೆ.
ಮುಂದಿನ ವರ್ಷದ ಮಾರ್ಚ್ ವೇಳೆಗೆ ಹಣದುಬ್ಬರ ದರ ಶೇ.5.5ಕ್ಕೆ ಇಳಿಕೆಯಾಗಲಿದೆ ಎಂದು ಇಂಡಿಯನ್ ಎಕಾನಾಮಿಕ್ ಅಸೋಸಿಯೇಶನ್‌ನ 93ನೇ ವಾರ್ಷಿಕ ಸಭೆಯಲ್ಲಿ ಸಮಿತಿ ಮುಖ್ಯಸ್ಥ ರಂಗರಾಜನ್ ತಿಳಿಸಿದ್ದಾರೆ.
ಹಣದುಬ್ಬರ ದರ ಶೇ.5ಕ್ಕಿಂತ ಹೆಚ್ಚಳವಾದಲ್ಲಿ ದೇಶದ ಆರ್ಥಿಕತೆಯ ಮೇಲೆ ಗಂಭೀರವಾದ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.
ಅಕ್ಟೋಬರ್ ತಿಂಗಳಲ್ಲಿ ಶೇ.8.58ರಷ್ಟಿದ್ದ ಹಣದುಬ್ಬರ ದರ, ನವೆಂಬರ್ ತಿಂಗಳ ಅವಧಿಯಲ್ಲಿ ಶೇ.7.48ಕ್ಕೆ ಇಳಿಕೆ ಕಂಡಿತ್ತು.ಏತನ್ಮಧ್ಯೆ, ಆಹಾರ ಹಣದುಬ್ಬರ ದರ ಡಿಸೆಂಬರ್ 11ಕ್ಕೆ ವಾರಂತ್ಯಗೊಂಡಂತೆ ಶೇ.12.13ಕ್ಕೆ ಏರಿಕೆ ಕಂಡಿದೆ.