ಕಳೆದ ವಾರ ಗಗನಕ್ಕೇರಿದ ಈರುಳ್ಳಿ ದರ ನಿಧಾನವಾಗಿ ಇಳಿಕೆಯಾಗುತ್ತಿದ್ದು, ಸರಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದರಿಂದ ಶೀಘ್ರದಲ್ಲಿ ಈರುಳ್ಳಿ ದರ ನಿಯಂತ್ರಣಕ್ಕೆ ಬರಲಿದೆ ಎಂದು ಕೇಂದ್ರ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ಈರುಳ್ಳಿ ರಫ್ತು ವಹಿವಾಟಿಗೆ ಕೇಂದ್ರ ಸರಕಾರ ಈಗಾಗಲೇ ನಿಷೇಧ ಹೇರಿದೆ. ಅಮದು ಮಾಡಿಕೊಂಡ ಈರುಳ್ಳಿ, ದೇಶದ ಇತರ ಮಾರುಕಟ್ಟೆಗಳಿಗೆ ತಲುಪುತ್ತಿರುವುದರಿಂದ, ಶೀಘ್ರದಲ್ಲಿ ಈರುಳ್ಳಿ ದರದಲ್ಲಿ ಕುಸಿತವಾಗಿದೆ ಎಂದು ಸಚಿವ ಮುಖರ್ಜಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕೆಲ ಹಣ್ಣುಗಳು, ತರಕಾರಿ ಮತ್ತು ಹಾಲು ದರದಲ್ಲಿ ಹೆಚ್ಚಳವಾಗಿದೆ. ಬೇಡಿಕೆ ಮತ್ತು ಸರಬರಾಜು ಕೊರತೆಯಿಂದಾಗಿ ದರಗಳಲ್ಲಿ ಏರಿಕೆಯಾಗುತ್ತಿವೆ ಎಂದು ಹೇಳಿದ್ದಾರೆ.
ಈರುಳ್ಳಿ ಉತ್ಪಾದಕ ರಾಜ್ಯಗಳಲ್ಲಿ ಎದುರಾದ ಅಕಾಲಿಕ ಮಳೆ ಹಾಗೂ ಸರಬರಾಜು ಕೊರತೆಯಿಂದಾಗಿ, ಕಳೆದ ವಾರ ರಿಟೇಲ್ ಮಾರುಕಟ್ಟೆಗಳಲ್ಲಿ ಈರುಳ್ಳಿ ದರ ಪ್ರತಿ ಕೆಜಿಗೆ 85 ರೂಪಾಯಿಗಳಿಗೆ ಏರಿಕೆಯಾಗಿತ್ತು.