ಗಗನಕ್ಕೇರುತ್ತಿರುವ ತರಕಾರಿ ದರಗಳ ಏರಿಕೆಯಿಂದಾಗಿ, ಡಿಸೆಂಬರ್ 25ಕ್ಕೆ ವಾರಂತ್ಯಗೊಂಡಂತೆ ಆಹಾರ ಹಣದುಬ್ಬರ ದರ ಶೇ.18.32ಕ್ಕೆ ಏರಿಕೆ ಕಂಡಿದೆ.
ಆಹಾರ ಹಣದುಬ್ಬರ ದರ ನಿಯಂತ್ರಣಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ಸ ಆರ್ಥಿಕ ನೀತಿಗಳಲ್ಲಿ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿಗೊಳಿಸುವ ಅನಿವಾರ್ಯತೆಯಿದೆ ಎಂದು ವಿತ್ತಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವಾರ ಆಹಾರ ಹಣದುಬ್ಬರ ದರ ಶೇ.14.44ರಷ್ಟಿದ್ದು, ಇದೀಗ ಶೇ. 3.88ರಷ್ಟು ಏರಿಕೆ ಕಂಡು ಶೇ.18.32ಕ್ಕೆ ಏರಿಕೆಯಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಸಗಟು ಮಾರುಕಟ್ಟೆಗಳಲ್ಲಿ ತರಕಾರಿ ದರಗಳ ಏರಿಕೆಯಿಂದಾಗಿ, ಆಹಾರ ಹಣದುಬ್ಬರ ದರದಲ್ಲಿ ಶೇ.58.58ರಷ್ಟು ಏರಿಕೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವಾರ್ಷಿಕ ಆಧಾರದನ್ವಯ ಈರುಳ್ಳಿ ದರದಲ್ಲಿ ಶೇ.82.47ರಷ್ಟು ಏರಿಕೆಯಾಗಿದೆ. ಮೊಟ್ಟೆ, ಮಾಂಸ ಮತ್ತು ಮೀನು ದರಗಳಲ್ಲಿ ಶೇ.20.83ರಷ್ಟು ಹೆಚ್ಚಳವಾಗಿದೆ. ಹಣ್ಣು ಮತ್ತು ಹಾಲು ದರದಲ್ಲಿ ಕ್ರಮವಾಗಿ ಶೇ.19.99 ಹಾಗೂ ಶೇ.19.59ರಷ್ಟು ಹೆಚ್ಚಳವಾಗಿದೆ.
ಆಹಾರ ಹಣದುಬ್ಬರ ದರ ನಿರಂತರವಾಗಿ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ, ಜನವೆರಿ 25 ರಂದು ನಡೆಯಲಿರುವ ತ್ರೈಮಾಸಿಕ ಆರ್ಥಿಕ ಪರಿಷ್ಕರಣ ಸಭೆಯಲ್ಲಿ ಆರ್‌ಬಿಐ ರೆಪೋ ದರಗಳನ್ನು ಹೆಚ್ಚಿಸುವ ಸಾಧ್ಯತೆಗಳು ದಟ್ಟವಾಗಿವೆ.