ವಾಘಾ ಗಡಿಯ ಮೂಲಕ ಈರುಳ್ಳಿ ರಫ್ತು ನಿಷೇಧಿಸಿರುವ ಕ್ರಮ ಆಘಾತಕಾರಿಯಾಗಿದ್ದು, ಇಸ್ಲಾಮಾಬಾದ್‌ನ ಸಂಬಂಧಪಟ್ಟ ಸಚಿವಾಲಯದೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಸರಕಾರಿ ಮೂಲಗಳು ತಿಳಿಸಿವೆ.
ರಸ್ತೆ ಮೂಲಕ ಈರುಳ್ಳಿ ರಫ್ತು ನಿಷೇಧಿಸಿರುವ ಪಾಕಿಸ್ತಾನದ ಕ್ರಮ ಆಘಾತಕಾರಿ ಮತ್ತು ದುರದೃಷ್ಟಕರ ಸಂಗತಿಯಾಗಿದೆ. ಕನಿಷ್ಠ ಒಪ್ಪಂದ ಮಾಡಿಕೊಳ್ಳಲಾದ ಪ್ರಮಾಣದ ಈರುಳ್ಳಿಯನ್ನು ಬಿಡುಗಡೆಗೊಳಿಸಬೇಕು ಎಂದು ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕೆ ಖಾತೆ ಸಚಿವ ಆನಂದ್ ಶರ್ಮಾ ಸಲಹೆ ನೀಡಿದ್ದಾರೆ.
ಪಾಕಿಸ್ತಾನದಿಂದ ವಾಘಾ ಗಡಿಗೆ ಆಗಮಿಸಿದ ಸುಮಾರು 300 ಟ್ರಕ್ ಈರುಳ್ಳಿಯನ್ನು ಭಾರತಕ್ಕೆ ಸಾಗಿಸದಂತೆ ನಿರ್ಭಂಧ ಹೇರಲಾಗಿದೆ. ದೇಶದಲ್ಲಿಯೇ ಹೆಚ್ಚುತ್ತಿರುವ ಈರುಳ್ಳಿ ದರವನ್ನು ನಿಯಂತ್ರಿಸಲು ರಫ್ತು ತಡೆ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಪಾಕಿಸ್ತಾನದ ಅಧಿಕಾರಿಗಳು ತಿಳಿಸಿದ್ದಾರೆ.
ಏತನ್ಮಧ್ಯೆ, ಬೃಹತ್ ಪ್ರಮಾಣದ ಈರುಳ್ಳಿ ಸಮುದ್ರ ಮಾರ್ಗದ ಮೂಲಕ ಮುಂಬೈಯನ್ನು ತಲುಪಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.