ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸುತ್ತಿರುವುದನ್ನು ವಿರೋಧಿಸಿ ಮತ್ತು ರಾಜ್ಯ ಸರಕಾರವು ಈರುಳ್ಳಿಗೆ ದರ ನಿಗದಿ ಮಾಡಿರುವುದನ್ನು ವಿರೋಧಿಸಿ ನಾಸಿಕ್‌ನ ಈರುಳ್ಳಿ ವರ್ತಕರು ಎರಡು ದಿನ ಮುಷ್ಕರ ಘೋಷಿಸುತ್ತಿದ್ದಂತೆಯೇ, ಮುಂಬೈ ಸುತ್ತ ಮುತ್ತ ಈರುಳ್ಳಿ ದರ ಇಳಿಕೆ ಕಂಡು ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಇದಕ್ಕೆ ಪ್ರಧಾನ ಕಾರಣವೆಂದರೆ, ಈರುಳ್ಳಿ ಬೆಳೆದ ರೈತರು ತಾವಾಗಿಯೇ ಬಂದು ಮಾರುಕಟ್ಟೆಗೆ ಈರುಳ್ಳಿ ಸರಬರಾಜು ಮಾಡಿರುವುದು. ವರ್ತಕರ ಮುಷ್ಕರದಿಂದಾಗಿ ಈರುಳ್ಳಿ ಬೆಲೆ ಮತ್ತಷ್ಟು ಏರಿಕೆಯಾಗಲಿದೆ ಎಂಬ ಆತಂಕವಿತ್ತು. ಇದೀಗ ಬೆಳೆಗಾರರೇ ನೇರವಾಗಿ ಈರುಳ್ಳಿಯನ್ನು ಮಾರುಕಟ್ಟೆಗೆ ತಂದಿದ್ದರಿಂದ ಈ ಪರಿಸ್ಥಿತಿ ಉದ್ಭವಿಸಿದ ಕಾರಣ, ವಿಚಲಿತರಾದರೋ ಎಂಬಂತೆ ವರ್ತಕರು ತಮ್ಮ ಮುಷ್ಕರವನ್ನು ಹಿಂತೆಗೆದುಕೊಂಡಿದ್ದು, ಎಪಿಎಂಸಿಯಿಂದ ಈರುಳ್ಳಿ ಖರೀದಿ ಪ್ರಕ್ರಿಯೆ ಮಂಗಳವಾರದಿಂದ ಮುಂದುವರಿಯಲಿದೆ.
ಇದಕ್ಕೆ ಮೊದಲು, ತಾವು ಎಪಿಎಂಸಿ ಮಾರುಕಟ್ಟೆಯಿಂದ ಎರಡು ದಿನ ಈರುಳ್ಳಿ ಖರೀದಿಸುವುದಿಲ್ಲ ಎಂದು ಘೋಷಿಸಿದ್ದರು ವರ್ತಕರು. ಇದು ಏಷ್ಯಾದ ಅತಿದೊಡ್ಡ ಈರುಳ್ಳಿ ಮಾರುಕಟ್ಟೆಯಾಗಿರುವ ನಾಸಿಕ್ ಮತ್ತು ಲಸಲ್‌ಗಾಂವ್‌ನಿಂದ ಈರುಳ್ಳಿ ವಿತರಣಾ ಪ್ರಕ್ರಿಯೆಯನ್ನೇ ಸ್ಥಗಿತಗೊಳಿಸುವ ಆತಂಕವೂ ಮೂಡಿತ್ತು.
ಮೆಟ್ರೋ ನಗರಗಳಲ್ಲಿ ಕೆ.ಜಿ. ಈರುಳ್ಳಿ ಬೆಲೆ 55ರಿಂದ 70ರವರೆಗೆ ಇತ್ತು. ಇಂದು ಬೆಳಿಗ್ಗೆ ವರ್ತಕರು ಮುಷ್ಕರ ಘೋಷಿಸಿದ ತಕ್ಷಣವೇ ಬೆಳೆಗಾರರು ವಾಶಿ, ನವೀ ಮುಂಬೈ ಎಪಿಎಂಸಿ ಮಾರುಕಟ್ಟೆಗಳಿಗೆ ತಂದು ಹಾಕಿ, ಕಿಲೋ ಒಂದಕ್ಕೆ 10 ರೂಪಾಯಿಯಷ್ಟು ಕಡಿಮೆ ಬೆಲೆಗೆ ಮಾರತೊಡಗಿದರು. ಇದನ್ನು ಮಾರುಕಟ್ಟೆಗೆ ತರಲೆಂದು ರೈತರು 160 ಟ್ರಕ್ಕುಗಳನ್ನು ನಾಸಿಕ್ ಸುತ್ತಮುತ್ತಲಿಂದ ಬಾಡಿಗೆಗೆ ಪಡೆದಿದ್ದರು. ಈರುಳ್ಳಿ ಬಂದ ತಕ್ಷಣವಾ ವಾಶಿ ಮಾರುಕಟ್ಟೆಯಲ್ಲಿ ಬೆಲೆ 10 ರೂಪಾಯಿಗೂ ಇಳಿದಿತ್ತು.
ಈರುಳ್ಳಿಯನ್ನು ಕಿಲೋಗೆ 40ಕ್ಕಿಂತ ಹೆಚ್ಚು ಬೆಲೆಗೆ ಮಾರಬೇಡು ಎಂದು ರಾಜ್ಯ ಸರಕಾರ ನಿರ್ದೇಶನ ನೀಡಿದ್ದನ್ನು ಪ್ರತಿಭಟಿಸಿ ವರ್ತಕರು, ಎರಡು ದಿನ ಎಪಿಎಂಸಿಯಿಂದ ಈರುಳ್ಳಿ ಖರೀದಿಸದಿರಲು, ಮತ್ತು ಅದರನ್ನು ಜನರಿಗೆ ತಲುಪಿಸದಿರಲು ತೀರ್ಮಾನ ಕೈಗೊಂಡಿದ್ದರು.
ಈರುಳ್ಳಿ ಅಕ್ರಮ ದಾಸ್ತಾನು ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಭಾನುವಾರ ಲಸಲ್‌ಗಾಂವ್‌ನಲ್ಲಿ ಎರಡು, ನಾಸಿಕ್ ಮತ್ತು ಪಿಂಪಲ್‌ಗಾಂವ್‌ನ ತಲಾ ಒಂದೊಂದು ಮಂಡಿಗಳಿಗೆ ದಾಳಿ ನಡೆಸಿದ್ದರು.