ಗುಜರಾತ್, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರಗಳಿಂದ ಈರುಳ್ಳಿಯ ಹೊಸ ಬೆಳೆಯು ಮಾರುಕಟ್ಟೆಗೆ ಬರಲಾರಂಭಿಸಿರುವುದರಿಂದ ಕೆಲವೇ ದಿನಗಳಲ್ಲಿ ಈರುಳ್ಳಿಯ ಚಿಲ್ಲರೆ ಮಾರಾಟ ದರವು ಕಡಿಮೆಯಾಗಲಿದೆ ಎಂದು ಕೇಂದ್ರ ಆಹಾರ ಮತ್ತು ಕೃಷಿ ಸಚಿವ ಶರದ್ ಪವಾರ್ ಹೇಳಿದ್ದಾರೆ.
ಈರುಳ್ಳಿಯ ಹೊಸ ಬೆಳೆಗಳು ಬರುತ್ತಿರುವುದು ಒಳ್ಳೆಯ ಸಂಕೇತ. ಇದು ಶೀಘ್ರವೇ ಬೆಲೆಯ ಮೇಲೆ ತನ್ನ ಪ್ರಭಾವ ತೋರಿಸುತ್ತದೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಪವಾರ್ ಹೇಳಿದ್ದರು.
ಡಿಸೆಂಬರ್ 20ರಂದು ಈರುಳ್ಳಿ ಬೆಲೆ ಕಿಲೋ ಒಂದಕ್ಕೆ 70ರಿಂದ 85 ರೂ.ವರೆಗೆ ತಲುಪಿತ್ತು. ಮಹಾರಾಷ್ಟ್ರದಲ್ಲಿ ಕಂಡು ಬಂದ ಭಾರೀ ಮಳೆಯಿಂದ ಈರುಳ್ಳಿ ಬೆಳೆ ನಷ್ಟವಾಗಿತ್ತು ಎಂದು ಕಾರಣ ನೀಡಲಾಗುತ್ತಿದ್ದರೂ, ವ್ಯಾಪಾರಿಗಳು ಅಕ್ರಮವಾಗಿ ದಾಸ್ತಾನು ಮಾಡಿ, ಈರುಳ್ಳಿಯ ಕೃತಕ ಅಭಾವ ಸೃಷ್ಟಿಸಿದ್ದು ಕೂಡ ಗುಟ್ಟಾಗಿ ಉಳಿದಿರಲಿಲ್ಲ.
ಇತ್ತೀಚೆಗೆ ಈರುಳ್ಳಿ ರಫ್ತು ನಿಷೇಧ ಹಾಗೂ ಆಮದು ಮೇಲಿನ ಸುಂಕ ಹಿಂತೆಗೆತ ಮುಂತಾದ ಕ್ರಮಗಳಿಂದಾಗಿ ಈರುಳ್ಳಿ ಬೆಲೆ ಕಿಲೋಗೆ ಪ್ರಮುಖ ನಗರಗಳಲ್ಲಿ 55ರಿಂದ 60ರವರೆಗೆ ಇಳಿದಿತ್ತು. ಪಾಕಿಸ್ತಾನದಿಂದಲೂ ಈರುಳ್ಳಿ ಆಮದು ಮಾಡಿಸಿಕೊಳ್ಳಲಾಗಿದ್ದು, ಅದು ಮುಂಬೈ ದಾಸ್ತಾನು ಕೇಂದ್ರದಲ್ಲಿ ಕೊಳೆಯುತ್ತಿತ್ತು ಎಂಬ ಕುರಿತು ಈಗಾಗಲೇ ವರದಿಗಳು ಬಂದಿದ್ದವು. ಅಕ್ರಮ ದಾಸ್ತಾನುದಾರರ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದೂ ಆಯಿತು, ಇದನ್ನು ವಿರೋಧಿಸಿ ಏಷ್ಯಾದ ಅತಿದೊಡ್ಡ ಈರುಳ್ಳಿ ಮಾರುಕಟ್ಟೆಯಾಗಿರುವ ನಾಸಿಕ್ ವರ್ತಕರು ಮುಷ್ಕರ ಹೂಡಿದ್ದೂ ನಡೆಯಿತು. ಆಗ ರೈತರೇ ನೇರವಾಗಿ ಮಾರಾಟಕ್ಕಿಳಿದಾಗ, ವರ್ತಕರು ತಕ್ಷಣವೇ ತಮ್ಮ ಮುಷ್ಕರ ಹಿಂತೆಗೆದುಕೊಂಡ ಘಟನೆಯೂ ಸೋಮವಾರ ನಡೆದಿತ್ತು. ಆ ಬಳಿಕ ಪಾಕಿಸ್ತಾನದಲ್ಲಿಯೂ ಬೆಲೆ ಏರತೊಡಗಿದಾಗ ಅದು ಈರುಳ್ಳಿ ರಫ್ತು ನಿಷೇಧಿಸಿ, ಪುನಃ ಭಾರತಕ್ಕೆ ರಫ್ತು ಮಾಡಲು ಒಪ್ಪಿಗೆ ಸೂಚಿಸಿತ್ತು.
ಇದೇ ಪವಾರ್ ಅವರು, ಡಿಸೆಂಬರ್ 21ರಂದು ಈರುಳ್ಳಿ ಬೆಲೆಯು ಕೈಗೆ ನಿಲುಕದಂತೆ ಮೇಲೇರಿದ ಸಂದರ್ಭದಲ್ಲಿ, ಎಲ್ಲ ಕಡೆಯಿಂದ ತೀವ್ರ ಒತ್ತಡ ಬಂದಾಗ ಹೇಳಿಕೆ ನೀಡಿ, 3 ವಾರಗಳಲ್ಲಿ ಈರುಳ್ಳಿ ಬೆಲೆ ಕಡಿಮೆಯಾಗಲು 3 ವಾರಗಳು ಬೇಕು ಎಂದಿದ್ದರು. ಅವರ ಹೇಳಿಕೆಯೀಗ ನಿಜವಾಗುತ್ತಿದೆ. ಅಂದರೆ ಈರುಳ್ಳಿ ಬೆಲೆಯ ನಿಯಂತ್ರಣವೆಲ್ಲವೂ ಪವಾರ್ ಕೈಯಲ್ಲಿದೆಯೇ? ಅಥವಾ ಅವರಿಗೆ ಇಂಥಹಾ ಪರಿಸ್ಥಿತಿಯ ಬಗ್ಗೆ ಸಂಪೂರ್ಣ ಲೆಕ್ಕಾಚಾರ, ಅರಿವು ಇತ್ತೇ?