ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಬೆಲೆ ಏರಿಕೆಗೆ ಕೊನೆಗೂ ಎಚ್ಚೆತ್ತ ಪ್ರಧಾನಿ: ಉನ್ನತ ಮಟ್ಟದ ಸಭೆ (Price Rise | Inflation | UPA | Manmohan singh acts | Sharad Pawar)
Bookmark and Share Feedback Print
 
ಜನ ಸಾಮಾನ್ಯನ ಯಾತನಾಮಯ ಬದುಕಿಗೆ ಕಾರಣವಾಗಿರುವ ಬೆಲೆ ಏರಿಕೆಯ ಬಿಸಿ ಬಹುಶಃ ಅಧಿಕಾರಸ್ಥರಿಗೂ ತಟ್ಟಿದೆಯೋ ಎಂಬಂತೆ ಕಂಡುಬಂದಿದ್ದು, ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಕೊನೆಗೂ ಎಚ್ಚೆತ್ತುಕೊಂಡಿದ್ದಾರೆ. ಮಂಗಳವಾರ ಅವರು ತಮ್ಮ ನಿವಾಸದಲ್ಲಿ ಈ ಕುರಿತು ಚರ್ಚಿಸಲೆಂದು ಉನ್ನತ ಮಟ್ಟದ ಸಭೆ ಕರೆದಿರುವುದರೊಂದಿಗೆ, ಜನ ಸಾಮಾನ್ಯರು ಆಶಾಭಾವನೆಯೊಂದಿಗೆ ತಮ್ಮ ಚಿತ್ತವನ್ನು ಅತ್ತ ನೆಟ್ಟಿದ್ದಾರೆ.

ಈರುಳ್ಳಿ ಹಾಗೂ ಇತರ ತರಕಾರಿಗಳು, ಹಾಲು ಬೆಲೆಗಳು ರಾಕೆಟ್‌ನಂತೆ ಮೇಲಕ್ಕೇರುತ್ತಿದ್ದು, ಮೂರು ವಾರಗಳೊಳಗೆ ಈರುಳ್ಳಿ ಬೆಲೆ ಇಳಿಯಲಿದೆ ಎಂಬ ಕೃಷಿ ಸಚಿವ ಶರದ್ ಪವಾರ್ ಅವರ ಹೇಳಿಕೆಯೂ ನಿಜವಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಆಹಾರ ಹಣದುಬ್ಬರ ದರವಂತೂ ಯದ್ವಾ ತದ್ವಾ ಮೇಲಕ್ಕೇರಿ ಶೇ.18ನ್ನು ದಾಟಿದೆ.

ಡಿಸೆಂಬರ್ ತಿಂಗಳಲ್ಲಿ ಈರುಳ್ಳಿ ಬೆಲೆ ಏರಿಕೆಯಾದಾಗ, ತೀವ್ರ ಒತ್ತಡಕ್ಕೆ ಸಿಲುಕಿದ್ದ ಪ್ರಧಾನಿ, ಈ ಕುರಿತು ವರದಿ ಸಲ್ಲಿಸುವಂತೆ ಕೃಷಿ ಸಚಿವರಿಗೆ ಹೇಳಿ ಕೈತೊಳೆದುಕೊಂಡುಬಿಟ್ಟಿದ್ದರು. ಆದರೂ ಬೆಲೆಗಳು ಇಳಿದಿಲ್ಲ.

ಅಕ್ಕಿ, ಗೋಧಿ ಮತ್ತು ಸಂಬಾರ ಬೇಳೆ ಕಾಳುಗಳ ಬೆಲೆ ಸ್ಥಿರವಾಗಿದೆ, ಆದರೆ ತರಕಾರಿ ಬೆಲೆ ಏರುಗತಿಯಲ್ಲೇ ಇದೆ ಎಂದಿದ್ದರು ಪವಾರ್. ಈರುಳ್ಳಿ ದರವಂತೂ 50ಕ್ಕಿಂತ ಕೆಳಗೆ ಬರಲು ಕೇಳುತ್ತಲೇ ಇಲ್ಲ.

ಇದೆಲ್ಲದಕ್ಕೂ ಬೇಡಿಕೆ ಮತ್ತು ಪೂರೈಕೆಯ ನಿರ್ವಹಣೆಯಲ್ಲಾಗಿರುವ ಎಡವಟ್ಟೇ ಕಾರಣ ಎಂದು ವಿಶ್ಲೇಷಿಸಲಾಗುತ್ತಿದ್ದು, ಯುಪಿಎ ಸರಕಾರ ಈ ನಿಟ್ಟಿನಲ್ಲಿ ಕಳೆದ ಎರಡು ವರ್ಷಗಳಿಂದಲೂ ವಿಫಲವಾಗುತ್ತಿರುವುದು ಜನ ಸಾಮಾನ್ಯರ ಆಕ್ರೋಶಕ್ಕೂ ಕಾರಣವಾಗಿದೆ.

ಈ ಹಿಂದೆ, ಬೆಲೆ ಏರಿಕೆಗೆ ಸಂಬಂಧಿಸಿ ವಿಪಕ್ಷಗಳ ತೀವ್ರ ಟೀಕೆಗೆ, ಬೆಲೆ ದಿಢೀರ್ ಇಳಿಸಲು ತನಗೆ ಮ್ಯಾಜಿಕ್ ಮಾಡಲು ಗೊತ್ತಿಲ್ಲ ಎಂದು ಹೇಳಿದ್ದ ಪ್ರಧಾನ ಮಂತ್ರಿಗಳು, ಇದೀಗ ಎಚ್ಚೆತ್ತುಕೊಂಡಂತೆ ಕಂಡುಬರುತ್ತಿದ್ದು, ವಿತ್ತ ಸಚಿವ ಪ್ರಣಬ್ ಮುಖರ್ಜಿ, ಗೃಹ ಸಚಿವ ಪಿ.ಚಿದಂಬರಂ, ಆಹಾರ ಮತ್ತು ಕೃಷಿ ಸಚಿವ ಶರದ್ ಪವಾರ್, ಯೋಜನಾ ಆಯೋಗ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅವರನ್ನು ಕರೆಸಿಕೊಂಡು ಸಮಾಲೋಚನೆ ನಡೆಸುತ್ತಿದ್ದಾರೆ. ಇದರಿಂದ ಈ ಸಭೆಯೂ ಹಿಂದಿನ ಸಭೆಗಳಂತೆಯೇ, ನಿಷ್ಫಲವಾಗುತ್ತದೆಯೋ ಅಥವಾ ಒಂದಿಷ್ಟಾದರೂ ಫಲಪ್ರದವಾಗುತ್ತದೆಯೇ ಎಂಬುದು ಕಾದುನೋಡಬೇಕಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ