ನೆನೆದಾಕ್ಷಣ ಹಣ ಕೊಡುವ ಎಟಿಎಂ ಯಂತ್ರವೆಂದರೆ ಎಲ್ಲರಿಗೂ ಅಕ್ಕರೆ. ಆದರೆ ಅದು ಅಷ್ಟೇ ಕೊಳಕು ಕೂಡ ಹೌದು. ಅದು ನಿಮಗೆ ಬೇಧಿಯಂತಹಾ ಕಾಯಿಲೆಯನ್ನೂ ತಂದೊಡ್ಡಬಹುದು ಎಂದರೆ ನಂಬುತ್ತೀರಾ? ಹೌದು. ಇಂಗ್ಲೆಂಡ್‌ನ ವೈದ್ಯಕೀಯ ತಜ್ಞರ ತಂಡ ಪರೀಕ್ಷೆ ನಡೆಸಿ ಕಂಡುಕೊಂಡ ಪ್ರಕಾರ, ಎಟಿಎಂ ಎಂಬುದು ಸಾರ್ವಜನಿಕ ಶೌಚಾಲಯದಷ್ಟೇ ಕೊಳಕಾಗಿದೆ.
ಶೌಚಾಲಯದಲ್ಲಿರುವ ಬ್ಯಾಕ್ಟೀರಿಯಾಗಳು ಮತ್ತು ಎಟಿಎಂನಲ್ಲಿರುವ ಬ್ಯಾಕ್ಟೀರಿಯಾಗಳು ಒಂದೇ ತೆರನಾದವುಗಳಾಗಿವೆ. ಈ ಬ್ಯಾಕ್ಟೀರಿಯಾಗಳು ಭೇದಿ ಸೇರಿದಂತೆ ಮಾನವನ ದೇಹದಲ್ಲಿ ಹಲವು ರೀತಿಯ ಅನಾರೋಗ್ಯವನ್ನು ಸೃಷ್ಟಿಸಬಲ್ಲವು ಎನ್ನುತ್ತದೆ ಈ ವರದಿ.
ಸಾರ್ವಜನಿಕ ಶೌಚಾಲಯ ಮತ್ತು ಎಟಿಎಂನ ಕೀಪ್ಯಾಡ್‌ಗಳ ಸ್ಯಾಂಪಲ್‌ಗಳನ್ನು ತೆಗೆದುಕೊಂಡು ಅದನ್ನು ಮೈಕ್ರೋಸ್ಕೋಪ್‌ನಿಂದ ಪರೀಕ್ಷಿಸಿದಾಗ ಎರಡೂ ಕಡೆಗಳಿಂದ ತೆಗೆಯಲಾಗಿದ್ದ ಹತ್ತಿಯಲ್ಲಿ ಬೇಧಿ ಮತ್ತು ಅನಾರೋಗ್ಯಕ್ಕೆ ಕಾರಣವಾಗಬಲ್ಲ ಸ್ಯೂಡೊಮೊನಾಸ್ ಮತ್ತು ಬೇಸಿಲಸ್ ಎಂಬ ಕೀಟಾಣುಗಳು ಗೋಚರವಾಗಿವೆ.
'ಸಾರ್ವಜನಿಕ ಶೌಚಾಲಯದಲ್ಲಿ ಕಂಡುಬಂದಂತೆಯೇ ಅಧಿಕ ಪ್ರಮಾಣದ ಕೀಟಾಣುಗಳು ಎಟಿಎಂ ಯಂತ್ರದಲ್ಲೂ ಇರುವುದು ಕಂಡು ಅಚ್ಚರಿಯಾಯಿತು' ಎಂದಿರುವ ಬಯೋಕೋಟ್ ಸಂಸ್ಥೆಯ ಸೂಕ್ಷ್ಮ ಜೀವಶಾಸ್ತ್ರಜ್ಞ ರಿಚರ್ಡ್ ಹೇಸ್ಟಿಂಗ್ಸ್, ಇಲ್ಲಿ ಕಂಡುಬಂದ ಕೀಟಾಣುಗಳು ಸಾಮಾನ್ಯ ಮನುಷ್ಯನ ಆರೋಗ್ಯವನ್ನು ಹದಗೆಡಿಸುವಂತದ್ದು ಎಂದಿದ್ದಾರೆ.
ಈ ಮೊದಲು ಬಯೋಕೋಟ್ ಸೂಕ್ಷ್ಮ ಸಂಶೋಧನಾ ಸಂಸ್ಥೆ ನಡೆಸಿದ ಸಮೀಕ್ಷೆಗಳಲ್ಲಿ, ಸಾರ್ವಜನಿಕ ಶೌಚಾಲಯಗಳೇ ಅನಾರೋಗ್ಯದ ಕೇಂದ್ರಗಳು ಎಂದು ಬ್ರಿಟಿಷರಲ್ಲಿ ಹೆಚ್ಚಿನವರು ನಂಬಿದ್ದರೆಂಬುದು ತಿಳಿದುಬಂದಿತ್ತು.
ಅಲ್ಲದೆ ಸಾರ್ವಜನಿಕ ದೂರವಾಣಿಯನ್ನು ಉಪಯೋಗಿಸುತ್ತಿರುವ ಸುಮಾರು 3,000 ಜನರನ್ನೂ ಪರೀಕ್ಷೆಗೊಳಪಡಿಸಿ, ಅಸುರಕ್ಷತೆಯಿಂದ ಕೂಡಿದ ದೂರವಾಣಿ ಉಪಯೋಗಿಸುವುದರಿಂದಲೂ ಆರೋಗ್ಯ ಕೆಡುತ್ತಿರುವುದನ್ನು ಅದರ ಸಮೀಕ್ಷೆಯು ಬೆಳಕಿಗೆ ತಂದಿತ್ತು.