ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಈ ದಿನಗಳಲ್ಲಿ, ನೀರು ಬಳಸಿ ಕಾರು, ಬೈಕು ಓಡಿಸುವಂತಾದರೆ ಹೇಗಿರುತ್ತೆ? ಒಮ್ಮೆ ಊಹಿಸಿನೋಡಿ. ವಿಶ್ವವೇ ಪೆಟ್ರೋಲ್‌ಗೆ ಬದಲಿ ಇಂಧನವನ್ನು ಕಂಡುಹಿಡಿಯಲು ಹೆಣಗಾಡುತ್ತಿರುವಾಗ ಇತ್ತ ನಮ್ಮ ಯುವ ವಿಜ್ಞಾನಿ ಆ ಸಾಧನೆಯನ್ನು ಮಾಡಿ ತೋರಿಸಿದ್ದಾರೆ.
ನೀರಿನಲ್ಲಿರುವ ಜಲಜನಕದ ಅಂಶವನ್ನು ವಾಹನಗಳ ಇಂಧನವನ್ನಾಗಿ ಪರಿವರ್ತಿಸಿ, ಅದರಿಂದ 350 ಸಿಸಿ ಮೊಟಾರು ಬೈಕನ್ನು ಸುಮಾರು ಒಂದು ಗಂಟೆ ಕಾಲ ಚಲಾಯಿಸಬಲ್ಲ ಸಂಶೋಧನೆ ನಡೆಸಿರುವ ಯುವ ವಿಜ್ಞಾನಿ ಗೋವಿಂದ ಮಾಳವೀಯ, ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವಂತೆ ಟಾಟಾ ಕಾರುಗಳ ಒಡೆಯ, ಉದ್ಯಮಿ ರತನ್ ಟಾಟಾ ಅವರಿಗೆ ಪತ್ರ ಬರೆದಿದ್ದಾರೆ.
ತಮ್ಮ ಸುಮಾರು ಒಂದೂವರೆ ದಶಕದ ಕಠಿಣ ಪರಿಶ್ರಮದಿಂದ ತಾನು ಈ ತಂತ್ರಜ್ಞಾನವನ್ನು ಕಂಡುಹಿಡಿದಿದ್ದು, ತಮ್ಮ ಸಂಸ್ಥೆಯಿಂದ ಜಲ-ಆಧಾರಿತ ಕಾರುಗಳ ತಯಾರಿಕೆಯ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ತನ್ನನ್ನೂ ಸೇರಿಸಿಕೊಳ್ಳುವಂತೆ ಮಾಳವೀಯ ಕೇಳಿಕೊಂಡಿದ್ದಾರೆ.
ಸೂಕ್ತ ಮೂಲಸೌಕರ್ಯ ಮತ್ತು ಅವಕಾಶ ಒದಗಿಸಿಕೊಟ್ಟರೆ, ನೀರಿನಿಂದ ಓಡುವ ಕಾರಿನ ಎಂಜಿನ್ ತಯಾರಿಸಬಲ್ಲೆ ಎಂದು 12 ವರ್ಷಗಳ ಹಿಂದೆ ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ ಡಿಪ್ಲೊಮಾ ಪದವಿ ಪಡೆದಿರುವ ಮಾಳವೀಯ ದೃಢವಾಗಿ ಹೇಳಿದ್ದಾರೆ.
ಒಂದು ಕೆಜಿ ಕಾಸ್ಟಿಕ್ ಸೋಡಾ (ಸೋಡಿಯಂ ಹೈಡ್ರಾಕ್ಸೈಡ್) ಮತ್ತು ಎರಡು ಕೆಜಿ ಅಲ್ಯುಮಿನಿಯಂ ಚೂರನ್ನು ನೀರಿನೊಂದಿಗೆ ಬೆರೆಸಿ, ಆ ಮೂಲಕ ಉತ್ಪತ್ತಿಯಾದ ಜಲಜನಕವನ್ನು ಉಪಯೋಗಿಸಿಕೊಂಡು ಪ್ರಸ್ತುತ ಬೈಕ್ ಓಡಿಸುತ್ತಿರುವುದಾಗಿ ತನ್ನ ಪತ್ರದಲ್ಲಿ ತಿಳಿಸಿರುವ ಅವರು, ಜಲಜನಕದಲ್ಲಿರುವ ದಹನಶೀಲತೆಯಿಂದಾಗಿ ಸ್ಫೋಟವಾಗುವುದನ್ನು ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದಿದ್ದಾರೆ.
ನೀರು ಚಾಲಿತ ಕಾರಿನ ಸಂಶೋಧನೆಗೆ ಅಧಿಕ ಹಣ ವಿನಿಯೋಗಿಸುವುದಾಗಿ ಇತ್ತೀಚೆಗೆ ಟಾಟಾ ಪ್ರಕಟಿಸಿತ್ತು.