ಉದ್ಯಮವೇ ಆಗಿಬಿಟ್ಟಿರುವ ಶಿಕ್ಷಣ ವ್ಯವಸ್ಥೆಗೆ ಬ್ರೇಕ್ ಬಿದ್ದಿದೆ. ಕೇಂದ್ರೀಯ ಪಠ್ಯಕ್ರಮದಡಿ ಕಲಿಯುತ್ತಿರುವ ಮಕ್ಕಳ ಪೋಷಕರು ಇನ್ನು ನಿಟ್ಟುಸಿರುಬಿಡಬಹುದು. ಇದೀಗ ಸಿಬಿಎಸ್ಇ ಮತ್ತು ಐಸಿಎಸ್ಇ ಶಾಲೆಗಳನ್ನೂ ರಾಜ್ಯ ಸರಕಾರದ ನಿಯಂತ್ರಣದಡಿಗೆ ಹೈಕೋರ್ಟ್ ತಂದಿರುವುದರಿಂದ, ಶಾಲಾ ಶುಲ್ಕ ಪಾವತಿಗೆ ಒದ್ದಾಡುತ್ತಿದ್ದ ಪೋಷಕರು ಸಮಾಧಾನ ಪಡುವಂತಾಗಿದೆ.
ಮಹತ್ವದ ತೀರ್ಪೊಂದರಲ್ಲಿ ನ್ಯಾಯಮೂರ್ತಿ ಜಗಮೋಹನ್ ದಾಸ್ ಅವರು, ಕರ್ನಾಟಕ ರಾಜ್ಯ ಶಿಕ್ಷಣ ಕಾಯಿದೆ-1983ಕ್ಕೆ 1998ರಲ್ಲಿ ಮಾಡಿದ ತಿದ್ದುಪಡಿಯನ್ನು ಅನೂರ್ಜಿತಗೊಳಿಸಿದರು. ಈ ತಿದ್ದುಪಡಿಯು, ಸಿಬಿಎಸ್ಇ ಮತ್ತು ಐಸಿಎಸ್ಇ ಶಿಕ್ಷಣ ಸಂಸ್ಥೆಗಳನ್ನು ಕಾಯಿದೆಯಿಂದ ಹೊರಗಿರಿಸಿತ್ತು.
ಇದೀಗ ಹೈಕೋರ್ಟ್ ಆದೇಶದ ಪರಿಣಾಮವಾಗಿ, ಶಾಲಾ ಆಡಳಿತ ಮಂಡಳಿಗಳು ಇನ್ನು ಮುಂದೆ ಮಕ್ಕಳ ದಾಖಲಾತಿ ನೀತಿ, ಶುಲ್ಕ ನಿಗದಿ, ಶಿಕ್ಷಕರ ವೇತನ ಮುಂತಾದವುಗಳಲ್ಲಿ ಸರಕಾರದ ನಿಯಮಾವಳಿಗಳನ್ನು ಪಾಲಿಸಬೇಕಿದ್ದು, ಶಾಲೆಗಳನ್ನು ನಡೆಸಲು ರಾಜ್ಯ ಸರಕಾರದಿಂದ ಅನುಮತಿಯನ್ನೂ ಪಡೆಯಬೇಕು.
ಶಾಲಾ ಮಕ್ಕಳ ಶುಲ್ಕಕ್ಕೆ ಮಿತಿಯೇ ಇರಲಿಲ್ಲ. ಹೀಗಾಗಿ ಆಡಳಿತ ಮಂಡಳಿಗಳು ಆರ್ಥಿಕ ಹಿಂಜರಿತ, ಮತ್ತಿತರ ಕಾರಣಗಳನ್ನು ನೀಡುತ್ತಾ ಬೇಕಾಬಿಟ್ಟಿ ಶುಲ್ಕ ನಿಗದಿಪಡಿಸಿದ್ದವು. ಈಗ ಅವುಗಳಿಗೆ ಕಡಿವಾಣ ಬಿದ್ದಂತಾಗಿರುವುದರಿಂದ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವ ಪೋಷಕರು ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ.
ಸರಕಾರದ ನಿಬಂಧನೆಗಳ ಪ್ರಕಾರ, ಅನುದಾನರಹಿತ ಶಾಲೆಯು ಪ್ರಾಥಮಿಕ ಶಿಕ್ಷಣಕ್ಕೆ ಗರಿಷ್ಠ 2400 ರೂ., ಹಿರಿಯ ಪ್ರಾಥಮಿಕ ಶಿಕ್ಷಣಕ್ಕೆ 2500 ರೂ. ಹಾಗೂ ಸೆಕೆಂಡರಿ ಶಿಕ್ಷಣಕ್ಕೆ 2600 ರೂ. ಶುಲ್ಕ ಮಾತ್ರ ಪಡೆಯಬಹುದು.
ಆದರೆ, ಕೇಂದ್ರೀಯ ಪಠ್ಯಕ್ರಮವುಳ್ಳ ಶಾಲೆಗಳು ತಿಂಗಳಿಗೆ ಕನಿಷ್ಠ 1800 ರೂ. ಶುಲ್ಕ ಪಡೆಯುತ್ತಿದ್ದವು. ಇದರೊಂದಿಗೆ ಸಂಸ್ಥಾಪಕರ ದಿನಾಚರಣೆ, ವಾರ್ಷಿಕೋತ್ಸವ, ಕ್ರೀಡಾದಿನ ಅದೂ ಇದೂ ಅಂತ ಏನೇನೋ ಹೆಸರಲ್ಲಿ ಸುಲಿಗೆ ಮಾಡುತ್ತಿದ್ದವು. ಇನ್ನು ಮುಂದಾದರೂ ಪೋಷಕರಿಗೆ ಹೊರೆಯಾಗದೆ ಮಕ್ಕಳಿಗೆ ಒಳ್ಳೆಯ ಶಿಕ್ಷಣ ದೊರೆಯಬಹುದೇ?