ಎರಡು ದಿನಗಳಲ್ಲಿ ಎರಡನೇ ಬಾರಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ದೇಶದ ಬೆಲೆ ಏರಿಕೆ, ಹಣದುಬ್ಬರ ಕುರಿತು ಚರ್ಚಿಸಲೆಂದು ಕರೆದ ಸಭೆ ಅಪೂರ್ಣವಾಗಿಯೇ ಮುಕ್ತಾಯವಾಗಿoದೆ. ಸಭೆಯಲ್ಲಿ ಏನು ಚರ್ಚೆಯಾಯಿತೆಂಬುದು ಬಹಿರಂಗಗೊಂಡಿಲ್ಲ.
ಬೆಲೆ ಏರಿಕೆ ಕುರಿತು ಪ್ರಧಾನಿ ಮಂಗಳವಾರ ಹಿರಿಯ ಸಂಪುಟ ಸಹೋದ್ಯೋಗಿಗಳೊಂದಿಗೆ ನಡೆಸಿದ ಸಭೆಯು ಅಪೂರ್ಣವಾಗಿತ್ತು. ಆದರೆ ಬುಧವಾರ ಕರೆಯಲಾಗಿದ್ದ ಸಭೆಯು ಅನೌಪಚಾರಿಕವಾಗಿತ್ತು. ಮಂಗಳವಾರದ ಸಭೆ ಮಾತ್ರ ಅಧಿಕೃತ ಎಂದು ಮೂಲಗಳು ಹೇಳಿವೆ. ಆದರೆ 90 ನಿಮಿಷಗಳ ಕಾಲ ನಡೆದ ಸಭೆಯಲ್ಲಿ ಏನು ಚರ್ಚೆ ನಡೆಯಿತು ಎಂಬುದನ್ನು ಬಹಿರಂಗಪಡಿಸಲಾಗಿಲ್ಲ.
ಮಂಗಳವಾರದ ಸಭೆಯಲ್ಲಿ ಗೃಹ ಸಚಿವ ಪಿ.ಚಿದಂಬರಂ, ವಿತ್ತ ಸಚಿವ ಪ್ರಣಬ್ ಮುಖರ್ಜಿ, ಕೃಷಿ ಸಚಿವ ಶರದ್ ಪವಾರ್, ಯೋಜನಾ ಆಯೋಗ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಮತ್ತು ಮುಖ್ಯ ವಿತ್ತೀಯ ಸಲಹೆಗಾರ ಕೌಶಿಕ್ ಬಸು ಹಾಜರಿದ್ದರು. ವಿರೋಧಪಕ್ಷಗಳು ಮತ್ತು ಜನ ಸಾಮಾನ್ಯರು ಕೂಡ ಬೆಲೆ ಏರಿಕೆ ಕುರಿತು ಧ್ವನಿ ಎತ್ತಲಾರಂಭಿಸಿದ್ದರಿಂದ ಕೊನೆಗೂ ಪ್ರಧಾನ ಮಂತ್ರಿಗಳು ಎಚ್ಚೆತ್ತುಕೊಂಡು ಸಭೆ ಕರೆದಿದ್ದರು.