ಸುಗ್ಗಿಯ ನಂತರ ಈರುಳ್ಳಿ ಹೊಸ ಫಸಲು ಬರುವುದರಿಂದ, ಸಗಟು ಮಾರುಕಟ್ಟೆಯಲ್ಲಿ ಹೆಚ್ಚು ಈರುಳ್ಳಿ ಸಂಗ್ರಹವಾಗಲಿದೆ. ಇದರಿಂದ ಇದುವರೆಗೆ ಕಣ್ಣೀರು ತರಿಸುತ್ತಿದ್ದ ಈರುಳ್ಳಿ ಬೆಲೆಯು ಪ್ರತೀ ಕೆಜಿಗೆ ರೂ. ಐದರಿಂದ ಹತ್ತರವರೆಗೆ ನಿಗದಿಯಾಗುವ ಸಾಧ್ಯತೆಯಿದೆ ಎಂದು ಅಜಾದ್‌ಪುರ ಸಗಟು ವ್ಯಾಪಾರಿಗಳ ಸಂಘ ತಿಳಿಸಿದೆ.
ಇತ್ತೀಚೆಗೆ ಕೆಲವೆಡೆಯಂತೂ ಪ್ರತೀ ಕೆಜಿ ಈರುಳ್ಳಿ ಬೆಲೆ ನೂರು ರೂಪಾಯಿಗೇರಿತ್ತು.
ಪ್ರಸ್ತುತ ಮಾರುಕಟ್ಟೆಯಲ್ಲಿ ಪ್ರತೀ ಕೆಜಿ ಸಗಟು ಬೆಲೆ 20ರಿಂದ 40 ರೂ.ವರೆಗೆ ಚಾಲ್ತಿಯಲ್ಲಿದೆ ಎಂದು ಆಜಾದ್‌ಪುರ ಹಣ್ಣು ಮತ್ತು ತರಕಾರಿ ವರ್ತಕರ ಚೇಂಬರ್ ಪ್ರಧಾನ ಕಾರ್ಯದರ್ಶಿ ರಂಜನ್ ಶರ್ಮಾ ತಿಳಿಸಿದ್ದಾರೆ.
ಈರುಳ್ಳಿಯನ್ನು ಸಂಗ್ರಹಿಸಿಟ್ಟಿದ್ದ ವ್ಯಾಪಾರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ದಾಳಿಯನ್ನು ವಿರೋಧಿಸಿ, ಎರಡು ದಿನಗಳ ಬಂದ್‌ಗೆ ಕರೆನೀಡಿದ್ದ ವ್ಯಾಪಾರಿಗಳು, ಮಂಗಳವಾರ ಸರಕಾರದಿಂದ ದಾಳಿ ನಡೆಸುವುದಿಲ್ಲ ಎಂಬ ಆಶ್ವಾಸನೆ ಬಂದ ನಂತರ, ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರನ್ನು ಭೇಟಿ ಮಾಡಿ ಬಂದ್ ಕರೆಯನ್ನು ಹಿಂತೆಗೆದಿದ್ದರು.
ಪ್ರತಿದಿನ ಈರುಳ್ಳಿ ಸರಬರಾಜು ಹೆಚ್ಚಾಗುತ್ತಿರುವುದರಿಂದ ಇನ್ನೆರೆಡು ದಿನದಲ್ಲಿ ಮಾರುಕಟ್ಟೆ ಬೆಲೆಯಲ್ಲಿ ಇಳಿಕೆಯಾಗಲಿದೆ.
ತೀವ್ರ ಮಳೆಯಿಂದಾಗಿ ಏಷ್ಯಾದ ಪ್ರಧಾನ ಈರುಳ್ಳಿ ಮಾರುಕಟ್ಟೆಯಾಗಿರುವ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಅಪಾರ ಪ್ರಮಾಣದ ಈರುಳ್ಳಿ ಬೆಳೆ ನಾಶವಾಗಿದ್ದರಿಂದ, ದೇಶದೆಲ್ಲೆಡೆ ಈರುಳ್ಳಿ ಬೆಲೆ ಒಮ್ಮೆಗೆ ಗಗನಕ್ಕೇರಿತ್ತು.