ಜನರನ್ನು ನೇರವಾಗಿ ತಟ್ಟುತ್ತಿರುವ ಈರುಳ್ಳಿಯ ಮೇಲೆ ಮಹಾರಾಷ್ಟ್ರದಲ್ಲೀಗ ರಾಜಕೀಯ ಮೇಲಾಟ ಶುರುವಾಗಿದೆ. ಇದರಿಂದ ಜನ ಸಾಮಾನ್ಯರಿಗೆ ಲಾಭವಂತೂ ಆಗುತ್ತಿದೆ. ಹೇಗಂದಿರಾ? ಒಂದು ಪಕ್ಷವು ಕೇವಲ 5 ರೂಪಾಯಿಗೆ ಒಂದು ಕಿಲೋ ಈರುಳ್ಳಿ ಮಾರುತ್ತಿದ್ದರೆ, ಮತ್ತೊಂದು ಪಕ್ಷ ಇದನ್ನು ಉಚಿತವಾಗಿಯೇ ನೀಡುತ್ತಿದೆ!
ಹಾಗಿದ್ದರೆ ಅಗ್ಗದ ದರದ ಈರುಳ್ಳಿಯೇನೂ ಯಾವುದೇ ಮಂಡಿಗಳಲ್ಲಿ, ತರಕಾರಿ ಅಂಗಡಿಗಳಲ್ಲಿ ದೊರೆಯುವುದಲ್ಲ. ಅದು ದೊರೆಯುವುದು ಶಿವಸೇನೆಯ ಶಾಖೆಗಳಲ್ಲಿ, ಮಹಾರಾಷ್ಟ್ರ ನವನಿರ್ಮಾಣ ವೇದಿಕೆಯ ಸ್ಟಾಲುಗಳಲ್ಲಿ ಅಥವಾ ಅಖಿಲ ಭಾರತೀಯ ಸೇನೆಯ ಕಚೇರಿಗಳಲ್ಲಿ!
ಮಾಜಿ ಭೂಗತ ದೊರೆ, ಹಾಲಿ ಶಾಸಕ, ಅಖಿಲ ಭಾರತೀಯ ಸೇನೆಯ ಸ್ಥಾಪಕ ಅರುಣ್ ಗಾವ್ಳಿಯ ಪಕ್ಷವು ಕಿಲೋಗೆ ಐದು ರೂಪಾಯಿಯಲ್ಲಿ ಈರುಳ್ಳಿ ಮಾರಾಟ ಮಾಡತೊಡಗಿದಾಗ, ಮುಂಬೈಕರ್‌ಗಳ ಬಗೆಗೆ ಅಗಾಧ ಕನಿಕರವಿರುವ ರಾಜ್ ಠಾಕ್ರೆ ಸುಮ್ಮನಿರಲಾದೀತೇ? ಉಚಿತವಾಗಿಯೇ ಅವರ ಎಂಎನ್ಎಸ್ ಪಕ್ಷವು ಹಂಚತೊಡಗಿದೆ.
ಹಲವಾರು ಸರಕಾರಗಳನ್ನು ಉರುಳಿಸಿದ, ಜನತೆಯಲ್ಲಿ ಆಕ್ರೋಶದ ಕಿಡಿ ಹತ್ತಿಸಿದ, ಖರೀದಿಸಿದವರ ಕಣ್ಣಲ್ಲಿ ನೀರು ತರಿಸುತ್ತಿದ್ದ ಈರುಳ್ಳಿ ಇದೀಗ ಈ ರೀತಿಯಲ್ಲೂ ಸುದ್ದಿಯಾಗುತ್ತಿದೆ. ಭಾನುವಾರ ಎನ್.ಎಂ.ಜೋಷಿ ಮಾರ್ಗ್‌ನಲ್ಲಿರುವ ಅರುಣ್ ಗಾವ್ಳಿ ಪಕ್ಷದ ಕಚೇರಿಯಲ್ಲಿ ಐದು ರೂಪಾಯಿಗೆ ಈರುಳ್ಳಿ ಮಾರಾಟವಾಗುತ್ತದೆಯಂತೆ.
ರಾಜ್ ಠಾಕ್ರೆಯ ಎಂಎನ್ಎಸ್ ಕಳೆದ ವಾರವೇ ಕಿಲೋಗೆ 9 ರೂಪಾಯಿ ದರದಲ್ಲಿ ಈರುಳ್ಳಿಯನ್ನು ಮಾರಾಟ ಮಾಡಲಾರಂಭಿಸಿತ್ತು. ಈ ಮಾರಾಟ ಇನ್ನೂ ನಡೆಯುತ್ತಿದೆ.
ಕಳೆದ ವರ್ಷ ಮುಂಗಾರು ಮಳೆ ತೀವ್ರವಾಗಿ, ಹಣದುಬ್ಬರ ದರವೂ ಏರಿಕೆಯಾದ ಸಂದರ್ಭದಲ್ಲಿ ಶಿವಸೇನೆಯು ತನ್ನ ಶಾಖೆಗಳಲ್ಲಿ ಅಗ್ಗದ ದರದಲ್ಲಿ ತರಕಾರಿ ಮಾರಾಟ ಮಾಡಿ ಈ ಸಂಪ್ರದಾಯ ಆರಂಭಿಸಿತ್ತು.
ಇದೀಗ ಗಾವ್ಳಿ ಕಡೆಯಿಂದ ಈರುಳ್ಳಿ ವಿತರಣೆಯು ಬೆಳಿಗ್ಗೆ 11 ಗಂಟೆಗೆ ಆರಂಭವಾಗಲಿದ್ದು, ಸ್ಟಾಕು ಇರುವವರೆಗೆ ಮುಂದುವರಿಯಲಿದೆ ಎಂದು ಗಾವ್ಳಿ ಪುತ್ರಿ, ಮುಂಬೈ ಕಾರ್ಪೊರೇಟರ್ ಗೀತಾ ಹೇಳಿದ್ದಾರೆ. ಇದಕ್ಕಾಗಿ ಅವರು ಪಕ್ಷದ ನಿಧಿಯನ್ನು ಬಳಸುತ್ತಿದ್ದಾರಂತೆ. ಮುಂಬೈ ಮಾರುಕಟ್ಟೆಯಲ್ಲಿ ಈಗಲೂ ಈರುಳ್ಳಿ ಬೆಲೆ 60 ರೂಪಾಯಿ ಇದೆ.
ರೈತರು ಈರುಳ್ಳಿಯನ್ನು 8-10 ರೂಪಾಯಿಗೆ ಮಾರುತ್ತಿದ್ದರೂ, ಜನ ಸಾಮಾನ್ಯರಿಗೆ ಇದು 60 ರೂಪಾಯಿಯಲ್ಲಿ ದೊರೆಯುತ್ತಿದೆ. ಇದೀಗ ಎಂಎನ್ಎಸ್, ಸೋಲಾಪುರ ಮತ್ತು ನಾಸಿಕ್ ರೈತರಿಂದ ನೇರವಾಗಿ ಈರುಳ್ಳಿಯನ್ನು ಖರೀದಿಸಿ, ಅದೇ ಬೆಲೆಗೆ ಮಾರುತ್ತಿದೆ. ಕಳೆದ ಐದು ದಿನಗಳಲ್ಲಿ ಎಂಎನ್ಎಸ್ ಇಷ್ಟು ಅಗ್ಗದ ದರದಲ್ಲಿ ಸುಮಾರು 100 ಟನ್ ಈರುಳ್ಳಿ ಮಾರಿದೆಯಂತೆ!
ಆದರೆ, ಬೇರೆಲ್ಲರಿಗಿಂತಲೂ ತನಗೇ ಹೆಚ್ಚು ಹೆಸರು ಬರಬೇಕು ಎಂಬ ಉದ್ದೇಶದಿಂದ ಎಂಎನ್ಎಸ್‌ನ ಘಾಟ್‌ಕೊಪರ್ ಪಶ್ಚಿಮ ಕ್ಷೇತ್ರದ ಶಾಸಕ ರಾಮ್ ಕದಂ ಅವರು, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, 11 ಸಾವಿರ ಕಿಲೋ ಈರುಳ್ಳಿ ಖರೀದಿಸಿ, ಉಚಿತವಾಗಿಯೇ ಹಂಚಿಬಿಟ್ಟಿದ್ದಾರೆ.
ಹಾಗಿದ್ರೆ ಮುಂಬೈಗೆ ಹೋಗಿ ಈರುಳ್ಳಿ ತಂದ್ರೂ ನಷ್ಟವೇನಿಲ್ಲ ಅಂದ್ಕೋತೀರಾ?