ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ತಲೆಮೇಲೆ ಕೈಹೊತ್ತು ಕುಳಿತ್ತಿದ್ದರೆ, ಇತ್ತ ಜಾರ್ಖಂಡ್‌ನ ರಾಜ್ಯ ಆಹಾರ ನಿಗಮದ (ಎಸ್ಎಫ್‌ಸಿ) ಉಗ್ರಾಣದಲ್ಲಿ ಸುಮಾರು 5 ಸಾವಿರ ಕ್ವಿಂಟಾಲ್ ಗೋಧಿ ಮತ್ತು ಒಂದು ಸಾವಿರ ಕ್ವಿಂಟಾಲ್ ಅಕ್ಕಿ ಕಳೆದ ನಾಲ್ಕು ವರ್ಷಗಳಿಂದ ಕೊಳೆಯುತ್ತಾ ಬಿದ್ದಿದೆ. ಈಗಷ್ಟೇ ಎಚ್ಚೆತ್ತ ಸರ್ಕಾರ ತಪ್ಪಿತಸ್ಥರ ವಿರುದ್ಧ ಉಗ್ರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.
'ಕೆಲಸಕ್ಕಾಗಿ ಆಹಾರ' ಯೋಜನೆಯಡಿ ಬಿಡುಗಡೆಯಾದ ಈ ಧಾನ್ಯಗಳು 2006 ರಿಂದಲೂ ಈ ಗೋದಾಮುಗಳಲ್ಲಿ ಕೊಳೆಯುತ್ತಿದೆ.
ಎಸ್ಎಫ್‌ಸಿ ಗೋದಾಮಿನಲ್ಲಿ ಈ ವಾರ ನಡೆದ ಆಹಾರ ದಾಸ್ತಾನು ಪರಿಶೀಲನೆಯ ಸಂದರ್ಭದಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ಗೋದಾಮಿನ ಅಧಿಕಾರಿಗಳು ಕೊಳೆತ ಆಹಾರಧಾನ್ಯಗಳನ್ನು ಮರೆಮಾಚಲು ನೋಡಿದರಾದರೂ, ಅದು ಸಾಧ್ಯವಾಗಿಲ್ಲ ಎಂದು ಮೂಲಗಳು ತಿಳಿಸಿದೆ.
ರಾಜ್ಯ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ.
ತನಿಖೆಯ ನಂತರ ತಪ್ಪೆಸಗಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಮಥುರಾ ಮಹತೊ ತಿಳಿಸಿದ್ದಾರೆ.
ಹತ್ತು ವರ್ಷಗಳ ಹಿಂದೆಯೇ ಬಿಹಾರದಿಂದ ಜಾರ್ಖಂಡ್ ಬೇರ್ಪಟ್ಟಿತ್ತಾದರೂ, ರಾಜ್ಯದ ಆಹಾರ ನಿಗಮದ ಮೇಲುಸ್ತುವಾರಿ ಇಂದಿಗೂ ಬಿಹಾರದ ಕೈಯಲ್ಲೇ ಇದೆ.
ಕಳೆದ ಆರು ವರ್ಷಗಳಿಂದ ಕ್ಷಾಮ ಪರಿಸ್ಥಿತಿಯನ್ನು ಎದುರಿಸುತ್ತಿರುವ ಜಾರ್ಖಂಡ್‌ನಲ್ಲಿ ಶೇ. 54 ರಷ್ಟು ಜನ ಬಡತನರೇಖೆಗಳಿಗಿಂತ ಕೆಳಗಿದ್ದಾರೆ.