ಭಾರತದ ಬೃಹತ್ ಉದ್ಯಮಿಗಳಲ್ಲಿ ಒಬ್ಬರಾಗಿರುವ ಅನಿಲ್ ಅಂಬಾನಿ ತೀವ್ರ ಮುಖಭಂಗಕ್ಕೀಡಾಗಿದ್ದಾರೆ. ಅವರ ಮಾಲಕತ್ವದ ಎರಡು ಕಂಪನಿಗಳು ಶೇರು ಮಾರುಕಟ್ಟೆಯಲ್ಲಿನ ಸೆಕಂಡರಿ ಮಾರುಕಟ್ಟೆಯಲ್ಲಿ ವ್ಯವಹಾರ ನಡೆಸದಂತೆ ಸೆಬಿ ಎರಡು ವರ್ಷಗಳ ನಿಷೇಧ ಹೇರಿದೆ.
ರಿಲಯೆನ್ಸ್ ಇನ್‌ಫ್ರಾಸ್ಟ್ರಕ್ಚರ್ (R-Infra) ಮತ್ತು ರಿಲಯೆನ್ಸ್ ನ್ಯಾಚುರಲ್ ರಿಸೋರ್ಸಸ್ ಲಿಮಿಟೆಡ್ (RNRL) ಎಂಬ ಅನಿಲ್ ಅಂಬಾನಿ ಸಮೂಹ ಸಂಸ್ಥೆಗಳ ಎರಡು ಕಂಪನಿಗಳು ವ್ಯವಹಾರದಲ್ಲಿ ಅಸಮರ್ಪಕತೆಯನ್ನು ತೋರಿಸಿರುವುದರಿಂದ, 2012ರ ಡಿಸೆಂಬರ್ ತಿಂಗಳಿನವರೆಗೆ ಶೇರುಪೇಟೆಯ ಸೆಕಂಡರಿ ಮಾರುಕಟ್ಟೆಯಲ್ಲಿ ವ್ಯವಹಾರ ನಡೆಸಬಾರದು ಎಂದು ಭಾರತೀಯ ಶೇರು ನಿಯಂತ್ರಣ ಮಂಡಳಿ (ಸೆಬಿ) ತನ್ನ ಆದೇಶದಲ್ಲಿ ತಿಳಿಸಿದೆ.
ಜತೆಗೆ ಅಂಬಾನಿ ಮತ್ತು ನಾಲ್ವರು ಹಿರಿಯ ಕಾರ್ಯ ನಿರ್ವಹಣಾಧಿಕಾರಿಗಳ ಮೇಲೂ ನಿಷೇಧ ಹೇರಲಾಗಿದೆ. ಇದು ಒಂದು ವರ್ಷ ಅವಧಿಯದ್ದು. ಅಲ್ಲದೆ ಕಂಪನಿಗಳು, ಎಕ್ಸಿಕ್ಯೂಟಿವ್‌ಗಳು ಮತ್ತು ಅಂಬಾನಿ ಮೇಲೆ 50 ಕೋಟಿ ರೂಪಾಯಿಗಳ ದಂಡ ಹಾಕಲಾಗಿದೆ.
ರಿಲಯೆನ್ಸ್ ಇನ್‌ಫ್ರಾದ ಉಪಾಧ್ಯಕ್ಷ ಸತೀಶ್ ಸೇಠ್ ಮತ್ತು ನಿರ್ದೇಶಕರುಗಳಾದ ಎಸ್.ಸಿ. ಗುಪ್ತಾ, ಜೆ.ಪಿ. ಚಲಸಾನಿ ಮತ್ತು ಲಲಿತ್ ಜಲನ್ ಅವರ ಮೇಲೆ ನಿಷೇಧ ಹೇರಲಾಗಿದೆ ಎಂದು ಸೆಬಿ ತನ್ನ ವೆಬ್‌ಸೈಟಿನಲ್ಲಿ ಪ್ರಕಟಿಸಿದೆ.
ತಮ್ಮ ಮೇಲಿನ ಆರೋಪಗಳನ್ನು ಒಪ್ಪಿಕೊಳ್ಳುವುದು ಅಥವಾ ತಳ್ಳಿ ಹಾಕುವುದನ್ನು ಮಾಡದೆ, ಕಂಪನಿಗಳು ಮತ್ತು ಎಕ್ಸಿಕ್ಯೂಟಿವ್‌ಗಳು ದಂಡ ತೆತ್ತಿದ್ದಾರೆ ಎಂದು ಸೆಬಿ ತಿಳಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಿಲಯೆನ್ಸ್ ಇನ್‌ಫ್ರಾ ವಕ್ತಾರರು, ಸೆಬಿ ಆದೇಶವು ಕಂಪನಿಗಳು ಮಾರುಕಟ್ಟೆಯಿಂದ ಶೇರು ಅಥವಾ ಶೇರು ಸಂಬಂಧಿ ಮೂಲಗಳಿಂದ ಹಣ ಎತ್ತುವುದಕ್ಕೆ ಅನ್ವಯಿಸುವುದಿಲ್ಲ. ಅದರ ಮೇಲೆ ನಿಷೇಧವಿಲ್ಲ. ಆದರೆ ಇತರ ಕಂಪನಿಗಳ ಶೇರುಗಳ ಮೇಲೆ ಕಂಪನಿಗಳು ಹೂಡಿಕೆ ಮಾಡುವಂತಿಲ್ಲ ಎಂದು ಹೇಳಿದ್ದಾರೆ.