ದಿನನಿತ್ಯದ ಸಾಮಾನುಗಳ ಬೆಲೆ ಏರಿಕೆಯ ನಡುವೆಯೇ ಜನರು ಸಂಕ್ರಾಂತಿ ಸಂಭ್ರಮದಲ್ಲಿ ಇರುವಾಗಲೇ ದೇಶೀಯ ತೈಲ ಕಂಪನಿಗಳು ದಿಢೀರನೆ ಮತ್ತೆ ಪೆಟ್ರೋಲ್ ದರ ಏರಿಸುವ ಮೂಲಕ ಗ್ರಾಹಕರಿಗೆ ಶಾಕ್ ನೀಡಿದೆ. ಪೆಟ್ರೋಲ್ ಲೀಟರ್‌ಗೆ 2.50ರಿಂದ 2.54 ರೂ.ಗೆ ಏರಿಸಿದೆ. ಇದು ಒಂದು ತಿಂಗಳಿನಲ್ಲಿಯೇ ಎರಡನೇ ಬಾರಿ ದರ ಏರಿಕೆಯಾದಂತಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲಬೆಲೆಯಲ್ಲಿ ಏರಿಕೆಯಾದ ಹಿನ್ನೆಲೆಯಲ್ಲಿ ದೇಶದ ಬೃಹತ್ ತೈಲ ಮಾರಾಟದ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಪ್ರತಿ ಲೀಟರ್‌ಗೆ 2.50ರೂ.ನಂತೆ ಏರಿಕೆ ಮಾಡಿದ್ದು, ಶನಿವಾರ ಮಧ್ಯರಾತ್ರಿಯಿಂದಲೇ ಈ ದರ ಜಾರಿಯಾಗಲಿದೆ.
ಅದೇ ರೀತಿ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಪೆಟ್ರೋಲ್ ಲೀಟರ್‌ಗೆ 2.54ರೂ.ಗೆ ಏರಿಸಿರುವುದಾಗಿ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ದೇಶದ ಮೂರನೇ ಅತಿ ದೊಡ್ಡ ತೈಲ ಮಾರಾಟ ಸಂಸ್ಥೆಯಾದ ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಪ್ರತಿ ಲೀಟರ್‌ಗೆ 2.53ರೂಪಾಯಿಗೆ ಹೆಚ್ಚಿಸಿದ್ದು, ಈ ದರ ಕೂಡ ಶನಿವಾರ ಮಧ್ಯರಾತ್ರಿಯಿಂದಲೇ ಜಾರಿಗೊಂಡಿದೆ.
ಪ್ರತಿಷ್ಠಿತ ಮೂರು ಕಂಪನಿಗಳು ಡಿಸೆಂಬರ್ 15-16ರಂದು ಪೆಟ್ರೋಲ್ ದರವನ್ನು ಪ್ರತಿ ಲೀಟರ್‌ಗೆ 2.94-2.96ರೂ.ಗೆ ಏರಿಸಿದ್ದವು. ಇದು ಕಳೆದ ಆರು ತಿಂಗಳಿನಲ್ಲಿಯೇ ಅತಿ ಹೆಚ್ಚಿನ ಏರಿಕೆ ಬೆಲೆಯಾಗಿತ್ತು. ಇದೀಗ ಹೊಸ ವರ್ಷದ ಶಾಕ್ ಟ್ರೀಟ್‌ಮೆಂಟ್ ಎಂಬಂತೆ ಮತ್ತೆ ಬೆಲೆ ಏರಿಕೆ ಮಾಡಿದೆ.
ಇಂಡಿಯನ್ ಆಯಿಲ್ ಕಾರ್ಪೋರೇಷನ್ ದರಪಟ್ಟಿಯಂತೆ ದೆಹಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 55.87 ರೂ.ಇತ್ತು, ಇಂದಿನಿಂದ ಆ ದರ 58.37ರೂ.ಗೆ ಹೆಚ್ಚಳವಾಗಿದೆ. ಭಾನುವಾರದಿಂದ ಎಚ್‌ಪಿಸಿಎಲ್ ಮತ್ತು ಬಿಪಿಸಿಎಲ್ ಪಂಪ್‌ಗಳಲ್ಲಿ ಪೆಟ್ರೋಲ್ ಲೀಟರ್‌ಗೆ 58.39ರೂ.ಗೆ ಮಾರಾಟವಾಗಲಿದೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ಏತನ್ಮಧ್ಯೆ ವೈಮಾನಿಕ ಇಂಧನ ದರ ಕೂಡ ಏರಿಕೆಯಾಗಿದೆ.