ಈರುಳ್ಳಿ ಮತ್ತು ತೈಲ ಬೆಲೆ ಏರಿಕೆಯಿಂದ ಬೇಸತ್ತು ಹೋಗಿದ್ದ ಜನರ ಬೆನ್ನಿಗೆ ಮತ್ತೊಂದು ಆಘಾತ ಸುದ್ದಿ!, ಅಡುಗೆ ಎಣ್ಣೆಯ ಬೆಲೆಯೂ ಗಗನಕ್ಕೇರಿದೆ. ಪ್ರತೀ ವಸ್ತುಗಳ ಬೆಲೆ ಒಂದಲ್ಲ ಒಂದು ಕಾರಣದಿಂದ ಏರಿಕೆಯಾಗಿರುವುದರಿಂದ ದಿಕ್ಕು ತೋಚದಂತಾಗಿರುವ ಸಾಮಾನ್ಯ ಜನರು, ಸಂಕಷ್ಟಕ್ಕೊಳಗಾಗಿದ್ದಾರೆ. ಕಳೆದ ಒಂದು ವರ್ಷದಲ್ಲೇ ದಿನಬಳಕೆಯ ಅಡುಗೆ ಎಣ್ಣೆ ಬೆಲೆ ಶೇ. 62 ರಷ್ಟು ಏರಿಕೆಯಾಗಿದೆ.
ಏರುತ್ತಿರುವ ಅಡುಗೆ ಎಣ್ಣೆಯ ಬೆಲೆ ಇಳಿಕೆಯಾಗುವ ಯಾವುದೇ ಲಕ್ಷಣ ಕಾಣುತ್ತಿಲ್ಲ ಎಂದು ಪರಿಣಿತರು ಅಭಿಪ್ರಾಯಪಟ್ಟಿದ್ದಾರೆ.
ದೇಶದ ಹಲವೆಡೆ ಕಡಲೆ ಎಣ್ಣೆ, ಸಾಸಿವೆ ಎಣ್ಣೆ, ಸೋಯಾ ಎಣ್ಣೆ, ಸೂರ್ಯಕಾಂತಿ, ವನಸ್ಪತಿ ಮುಂತಾದ ಅಡುಗೆ ಎಣ್ಣೆಗಳ ಬೆಲೆ ಕಳೆದ ವರ್ಷದ ಜನವರಿ 14 ರಿಂದ ಈ ವರ್ಷದ ಜನವರಿ 14ರ ಒಂದು ವರ್ಷದ ಅವಧಿಯಲ್ಲಿ ಶೇ.62ರಷ್ಟು ಏರಿಕೆಯಾಗಿದೆ ಎಂದು ಗ್ರಾಹಕರ ವ್ಯವಹಾರ ಸಚಿವಾಲಯದ ಅಂಕಿ ಅಂಶ ತಿಳಿಸುತ್ತದೆ.
ಗರಿಷ್ಠ ಬೆಲೆ ಏರಿರುವುದು ಸೂರ್ಯಕಾಂತಿ (ಸನ್ ಫ್ಲವರ್) ಎಣ್ಣೆಯಲ್ಲಿ. ಕಳೆದ ವರ್ಷ ಕಿಲೋಗೆ 68 ರೂ. ಇದ್ದ ಅದರ ಬೆಲೆ ಈ ವರ್ಷ 110ಕ್ಕೆ ಏರಿಕೆಯಾಗಿದೆ.
ಕಳೆದ ಒಂದು ವರ್ಷದ ಅವಧಿಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಡುಗೆ ತೈಲದ ಬೆಲೆ ಶೇ.15 ರಷ್ಟು ಏರಿಕೆಯಾಗಿದೆ. ಅದರ ಪ್ರಭಾವದಿಂದ ವಿಶ್ವದ ಅತೀ ಹೆಚ್ಚು ಅಡುಗೆ ಎಣ್ಣೆ ಆಮದುದಾರ ಭಾರತದ ಮೇಲೂ ನೇರ ಪರಿಣಾಮ ಬೀರಿದೆ.
2009-10ನೇ ಸಾಲಿನಲ್ಲಿ 8.82 ಮಿಲಿಯನ್ ಟನ್ ಅಡುಗೆ ಎಣ್ಣೆ ಆಮದು ಮಾಡಲಾಗಿತ್ತು.
ಬಲ್ಗೇರಿಯಾದಲ್ಲಿ ಸೂರ್ಯಕಾಂತಿ ಉತ್ಪಾದನೆ ಕಡಿಮೆಯಾದುದರಿಂದ ವಿಶ್ವಮಾರುಕಟ್ಟೆಯಲ್ಲಿ ಸೂರ್ಯಕಾಂತಿ ಎಣ್ಣೆ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಅಲ್ಲದೆ ಭಾರತದಲ್ಲಿಯೂ ಇಳುವರಿ ಕಡಿಮೆ ಇದ್ದುದರಿಂದ ಬೆಲೆಯಲ್ಲಿ ತೀವ್ರ ಪರಿಣಾಮ ಬೀರಿದೆ.