ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆಯ ಆಶ್ರಯದಲ್ಲಿ ಮೂರನೇ ರಾಜ್ಯಮಟ್ಟದ ಸಮ್ಮೇಳನ ಜನವರಿ 22ರಂದು ಗುಲ್ಬರ್ಗಾದ ಎಸ್.ಎಂ.ಪಂಡಿತ್ ರಂಗಮಂದಿರದ ಸಭಾಂಗಣದಲ್ಲಿ ನಡೆಯಲಿದೆ.
ಕರ್ನಾಟಕ 2020 ದೂರದೃಷ್ಟಿಯಲ್ಲಿ ಕರ್ನಾಟಕ ರಾಜ್ಯವನ್ನು ಬಂಡವಾಳಸ್ನೇಹಿ ಕೈಗಾರಿಕಾ ರಾಜ್ಯವನ್ನಾಗಿ ಪರಿವರ್ತಿಸುವ ಆಶಯದ ಹಿನ್ನೆಲೆಯಲ್ಲಿ ಈ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಎಫ್‌ಕೆಸಿಸಿಐ ಅಧ್ಯಕ್ಷ ಎಂ.ಎಸ್.ಶ್ರೀನಿವಾಸಮೂರ್ತಿ ತಿಳಿಸಿದರು.
ಕಳೆದ 2009ರ ಜೂನ್ 13 ಮತ್ತು 2010ರ ಮೇ 15ರಂದು ನಡೆದ ಸಮ್ಮೇಳನದಲ್ಲಿ ಕೈಗೊಂಡ ಚಿಂತನೆ ಹಾಗೂ ಸರಕಾರಕ್ಕೆ ಸಲ್ಲಿಸಿದ್ದ ಅಂಶಗಳ ಬಗ್ಗೆ ಪರಾಮರ್ಶೆ ನಡೆಸಲಾಗುವುದು ಎಂದು ಹೇಳಿದರು.
ಸಮ್ಮೇಳನದಲ್ಲಿ ಕೈಗಾರಿಕೆ, ತೆರಿಗೆ, ಮೂಲಭೂತ ಸೌಕರ್ಯ, ವಿದ್ಯುತ್, ಪ್ರವಾಸೋದ್ಯಮ, ಎಪಿಎಂಸಿ ಮತ್ತು ನಾಗರಿಕ ಸೌಲಭ್ಯಗಳ ಕ್ಷೇತ್ರಗಳ ಬಗ್ಗೆಯೂ ವಿಚಾರ ವಿಮರ್ಶೆ ನಡೆಸಲಾಗುವುದು ಎಂದು ವಿವರಿಸಿದರು.
ವಾಣಿಜ್ಯ ಮತ್ತು ಕೈಗಾರಿಕಾ ನೀತಿ ರೂಪಿಸುವ ಸಂಬಂಧ ಸರಕಾರ ಎಡವಿದ್ದು, ಜಿಲ್ಲಾ, ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳಿಗೆ ಸೂಕ್ತ ಪ್ರಾತಿನಿಧ್ಯ ಸಿಗುತ್ತಿಲ್ಲ. ಈ ಸಮ್ಮೇಳನ ನಡೆಸುವ ಮೂಲಕ ಪ್ರಾಂತೀಯ ಅಸಮತೋಲನ ಹೋಗಲಾಡಿಸುವುದಾಗಿ ಹೇಳಿದರು.