ಸಗಟು ಬೆಲೆ ಕುಸಿತ: ಗ್ರಾಹಕರಿಗೆ ಇನ್ನೂ ಕೈಗೆಟುಕದ ಈರುಳ್ಳಿ
ನವದೆಹಲಿ, ಮಂಗಳವಾರ, 18 ಜನವರಿ 2011( 09:30 IST )
ಕಳೆದ ಎರಡು ದಿನದಲ್ಲಿ ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಪ್ರತೀ ಕೇಜಿಗೆ 12 ರೂ. ವರೆಗೆ ಕುಸಿತ ಕಂಡಿದ್ದರೂ, ಇಲ್ಲಿನ ಮುಕ್ತ ಮಾರುಕಟ್ಟೆಯಲ್ಲಿ ಪ್ರತೀ ಕೇಜಿಗೆ 50ರಿಂದ 60 ರೂ. ಚಾಲ್ತಿಯಲ್ಲಿದೆ. ಸಗಟು ಬೆಲೆ ಕಡಿಮೆಯಾಗಿದ್ದರೂ, ಚಿಲ್ಲರೆ ಮಾರಾಟದ ಬೆಲೆ ಕಿಂಚಿತ್ತೂ ಇಳಿಯದಿರುವುದರಿಂದ ಗ್ರಾಹಕರು ತೀರಾ ಸಂಕಷ್ಟಕ್ಕೆ ಒಳಗಾಗುವ ಪರಿಸ್ಥಿತಿ ಎದುರಾಗಿದೆ.
ಕೇವಲ ದೆಹಲಿಯಲ್ಲಿ ಮಾತ್ರವಲ್ಲದೆ ಇತರ ಮಹಾನಗರಗಳಲ್ಲೂ ಬೆಲೆ ಏರಿಕೆಯಲ್ಲಿ ಗುರುತರ ವ್ಯತ್ಯಾಸ ಕಂಡುಬಂದಿಲ್ಲ. ಪ್ರಸ್ತುತ ಕೊಲ್ಕತ್ತಾ ಮಾರುಕಟ್ಟೆಯಲ್ಲಿ ಪ್ರತೀ ಕೇಜಿಗೆ 55ರಿಂದ 60 ರೂ. ಇದ್ದರೆ, ಮುಂಬೈನಲ್ಲಿ ಪ್ರತೀ ಕೇಜಿಗೆ 65 ರೂ. ಚಾಲ್ತಿಯಲ್ಲಿದೆ. ಹಾಗೂ ಸಂಕ್ರಾಂತಿ ಹಬ್ಬದ ಪ್ರಯುಕ್ತ ಚೆನ್ನೈ ಮಾರುಕಟ್ಟೆಯ ಹಲವು ಅಂಗಡಿಗಳು ಮುಚ್ಚಿದ್ದವು.
ಸರ್ಕಾರಿ ಅಂಕಿಅಂಶಗಳ ಪ್ರಕಾರ ಕಳೆದ ವರ್ಷದ ಇದೇ ಅವಧಿಯಲ್ಲಿ ಈರುಳ್ಳಿ ಪ್ರತೀ ಕೇಜಿಗೆ 21ರಿಂದ 26 ರೂ. ಗಳಷ್ಟಿತ್ತು.
ಏಷ್ಯಾದ ಅತೀ ದೊಡ್ಡ ಹಣ್ಣು ಮತ್ತು ತರಕಾರಿ ಮಾರುಕಟ್ಟೆ ಅಜಾದ್‌ಪುರ ಮಂಡಿ ಭಾನುವಾರವೂ ಮುಚ್ಚಿದ್ದರಿಂದ, ರಾಜಧಾನಿಯಲ್ಲಿ ಈರುಳ್ಳಿಯ ಯಾವುದೇ ವಹಿವಾಟು ಇರಲಿಲ್ಲ.
ಸಗಟು ತರಕಾರಿಗಳ ಪೂರೈಕೆ ರಾಜ್ಯಗಳಾದ ಮಹಾರಾಷ್ಟ್ರ, ಗುಜರಾತ್ ಮತ್ತು ರಾಜಸ್ಥಾನದಿಂದ ತರಕಾರಿ ಬರುವವರೆಗೆ ಗಗನಕ್ಕೇರಿರುವ ತರಕಾರಿ ಬೆಲೆ ಯಥಾಸ್ಥಿತಿ ಮುಂದುವರಿಯಲಿದೆ ಎಂದು ವರ್ತಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಶರ್ಮಾ ತಿಳಿಸಿದ್ದಾರೆ.
ಅಲ್ಲದೆ ಕಳೆದ ವಾರ ಪಾಕಿಸ್ತಾನದಿಂದ ಆಮದು ಮಾಡಲಾಗಿದ್ದ 200 ಟನ್ ತರಕಾರಿ, ಗುಜರಾತ್‌ನ ಮುದ್ರಾ ಬಂದರಿನಲ್ಲಿದ್ದು, ಲೋಹ್ರಿ ಹಬ್ಬದ ನಂತರ ದೆಹಲಿ ಮಾರುಕಟ್ಟೆಯನ್ನು ಪ್ರವೇಶಿಸಲಿರುವುದರಿಂದ ಬೆಲೆಯಲ್ಲಿ ಕೊಂಚ ವ್ಯತ್ಯಯ ಕಂಡುಬರಲಿದೆ ಎಂದು ತಿಳಿಸಿದ್ದಾರೆ.
ಈ ನಡುವೆ ದೆಹಲಿಯಲ್ಲಿ ಪ್ರತೀ ಕೇಜಿ ಈರುಳ್ಳಿಗೆ 70 ರಿಂದ 85 ರೂ. ಇದ್ದಾಗಲೂ, ಪ್ರತೀ ಕೇಜಿಗೆ 35ರೂ. ನಂತೆ ಕಳೆದ ಡಿಸೆಂಬರ್‌ನಿಂದ ಇಲ್ಲಿನ ರಾಷ್ಟ್ರೀಯ ಕೃಷಿ ಸಹಕಾರಿ ಸಂಸ್ಥೆ (ಎನ್ಎಎಫ್ಇಡಿ) ಮಾರಾಟ ಮಾಡುತ್ತಾ ಬರುತ್ತಿದೆ ಎಂದು ಸಂಸ್ಥೆ ತಿಳಿಸಿದೆ.