ಈರುಳ್ಳಿ ಬೆಲೆ ಇಳಿಯುತ್ತಿದೆ ಎಂದು ಗ್ರಾಹಕರು ಬಾಯಿಬಿಟ್ಟುಕೊಂಡು ಕಾತರದಿಂದ ಕಾಯುತ್ತಿರುವಂತೆಯೇ ಇನ್ನೊಂದೆಡೆಯಿಂದ ಮತ್ತೊಂದು ಅತ್ಯಗತ್ಯ ತರಕಾರಿಯಾಗಿರುವ ಟೊಮೆಟೋ ಕೈಗೆಟುಕದಷ್ಟು ಎತ್ತರಕ್ಕೇರತೊಡಗಿದ್ದು, ಈರುಳ್ಳಿ ಬೆಲೆಗೆ ಪೈಪೋಟಿ ನೀಡಲಾರಂಭಿಸಿದೆ.
ಇದಕ್ಕೂ ಕಾರಣ ವ್ಯವಸ್ಥೆಯೇ. ಪಾಕಿಸ್ತಾನಕ್ಕೆ ಈಗ ಟೊಮೆಟೋ ಭರ್ಜರಿಯಾಗಿ ರಫ್ತಾಗುತ್ತಿದೆ. ರಾಷ್ಟ್ರ ರಾಜಧಾನಿಯಲ್ಲಿ ಟೊಮೆಟೋ ಬೆಲೆ ಕಿಲೋಗೆ 60 ರೂಪಾಯಿವರೆಗೂ ಇದೆ. ಶನಿವಾರ ಇದು 70-80 ರೂಪಾಯಿವರೆಗೂ ತಲುಪಿತ್ತು, ಈಗ ಕೊಂಚ ಕಡಿಮೆಯಾಗಿದೆ ಎಂದಿದ್ದಾರೆ ಅಲ್ಲಿನ ವರ್ತಕರು.
ಏಷ್ಯಾದ ಅತಿದೊಡ್ಡ ಹಣ್ಣು-ತರಕಾರಿ ಮಾರುಕಟ್ಟೆ ಆಜಾದ್‌ಪುರ ಮಂಡಿಯಲ್ಲಿ ಟೊಮೆಟೋದ ಸಗಟು ದರ ಕಿಲೋಗೆ 15ರಿಂದ 30 ರೂಪಾಯಿ ಇದೆ. ಕಳೆದ ಒಂದು ವಾರದಿಂದಲೂ ಇದೇ ಮಟ್ಟದಲ್ಲಿತ್ತು. ಬೇರೆ ಮೆಟ್ರೋ ನಗರಗಳಾದ ಮುಂಬೈ, ಕೋಲ್ಕತಾ, ಚೆನ್ನೈಗಳಲ್ಲಿ ಕೂಡ ಕಿಲೋಗೆ 35ರಿಂದ 50 ರೂಪಾಯಿವರೆಗೂ ಇದೆ ಎಂದು ಟೊಮೆಟೋ ವರ್ತಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುಭಾಷ್ ಚುಕ್ ಹೇಳಿದ್ದಾರೆ.
ಪೂರೈಕೆಯಲ್ಲಿ ಶೇ.40ರಷ್ಟು ಕೊರತೆಯಿದೆ ಮಾತ್ರವೇ ಅಲ್ಲ, ಪಾಕಿಸ್ತಾನಕ್ಕೂ ಟೊಮೆಟೋ ರಫ್ತಾಗುತ್ತಿರುವುದೇ ಈ ಪರಿ ಬೆಲೆ ಏರಿಕೆಗೆ ಕಾರಣ ಎನ್ನುತ್ತಾರೆ ವರ್ತಕರು. ಗುಜರಾತ್, ಹರ್ಯಾಣ, ಉತ್ತರಾಖಂಡ ಮತ್ತು ರಾಜಸ್ಥಾನಗಳಲ್ಲಿ ಭಾರೀ ಚಳಿಯಿಂದಾಗಿ ಟೊಮೆಟೋ ಸಮರ್ಪಕವಾಗಿ ಹಣ್ಣಾಗುತ್ತಿಲ್ಲ. ಅಲ್ಲಿಂದ ಪೂರೈಕೆ ಕಡಿಮೆಯಾಗಿದ್ದು, ಬಂದಿದ್ದರಲ್ಲಿ ಶೇ.50ರಷ್ಟನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗುತ್ತಿದೆ ಎಂದು ಸುಭಾಷ್ ಹೇಳಿದ್ದಾರೆ.