ಆಧುನಿಕ ಸಮಾಜ ಎಲ್ಲೆಂದರಲ್ಲಿ ಕಳ್ಳತನ, ದರೋಡೆಯಿಂದ ನಲುಗುತ್ತಿದ್ದರೆ, ಇಲ್ಲಿ ಇಡೀ ಗ್ರಾಮವೇ ಬಾಗಿಲಿಲ್ಲದ ಮನೆಗಳಿಂದ ಕೂಡಿದೆ. ಇದರ ನಡುವೆ ಇದೀಗ, ಬ್ಯಾಂಕ್‌ಗಳಿಗೆ ಹೈ-ಟೆಕ್ ಭದ್ರತೆ ಒದಗಿಸಬೇಕೆಂಬ ಕೇಂದ್ರದ ಕಟ್ಟುನಿಟ್ಟಿನ ಕಾನೂನು ಜಾರಿಯಲ್ಲಿದ್ದರೂ, ಇಲ್ಲಿನ ದಿ ಯುನೈಟೆಡ್ ಕಮರ್ಶಿಯಲ್ (ಯುಕೊ) ಬ್ಯಾಂಕ್‌ಗೆ ಬೀಗವೇ ಇಲ್ಲ!. ಸಾಲದಕ್ಕೆ, ಅತೀ ಶೀಘ್ರದಲ್ಲೇ ಎಟಿಎಂ ಯಂತ್ರವೂ ಬರಲಿದೆ. ಎಲ್ಲಾ ಶನಿ ಮಹಾತ್ಮೆ. ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯ ಶನಿ ಶಿಂಗಣಾಪುರ ಗ್ರಾಮದಲ್ಲಿ ಇಂತಹ ಒಂದು ರಕ್ಷಣಾ ವ್ಯವಸ್ಥೆ ಜಾರಿಯಲ್ಲಿದೆ.
ಇಲ್ಲಿನ ಪ್ರಸಿದ್ಧ ಶನಿ ದೇವಾಲಯಕ್ಕೆ ಪ್ರತೀದಿನ ಐದು ಸಾವಿರಕ್ಕಿಂತಲೂ ಹೆಚ್ಚು ಭಕ್ತರು ಭೇಟಿ ನೀಡುತ್ತಾರೆ. ವಾರಾಂತ್ಯದಲ್ಲಿ ಭಕ್ತರ ಸಂಖ್ಯೆ ಲಕ್ಷ ದಾಟುತ್ತದೆ. ಗತಕಾಲದಿಂದಲೂ ಶನಿ ಶಿಂಗಣಾಪುರ ಗ್ರಾಮದಲ್ಲಿ ಶನಿದೇವರು ನೆಲೆಸಿರುವುದಾಗಿ ಪ್ರತೀತಿ. ಇಲ್ಲಿ ಯಾರೇ ಕಳ್ಳತನ ಮಾಡಿದ್ದರೂ ಶನಿದೇವರ ಶಾಪಕ್ಕೆ ಒಳಗಾಗುತ್ತಾರೆ ಎಂಬುದು ಇಲ್ಲಿನ ಜನರ ಗಾಢ ನಂಬಿಕೆ.
'ಹಲವು ವರ್ಷಗಳಿಂದ ಶನಿದೇವರನ್ನು ನಂಬಿ ಪೂಜಿಸುತ್ತಿರುವ ಈ ಗ್ರಾಮದಲ್ಲಿ ಇದುವರೆಗೂ ಯಾವುದೇ ಕಳ್ಳತನ ನಡೆದ ಉದಾಹರಣೆಯಿಲ್ಲ. ಜತೆಗೆ ಇಲ್ಲಿನ ಯಾವೊಂದು ಮನೆಗೂ ಬಾಗಿಲಿಲ್ಲ. ಇಲ್ಲಿನ ಜನರಲ್ಲಿ ಬೇರೂರಿರುವ ಅಪಾರ ನಂಬಿಕೆಯನ್ನು ಅರಿತ ನಾವು ಇಲ್ಲಿ ಬೀಗವಿಲ್ಲದ ಬ್ಯಾಂಕ್ ತೆರೆಯಲು ಮನಸು ಮಾಡಿದೆವು' ಎನ್ನುತ್ತಾರೆ ಹಿರಿಯ ಬ್ಯಾಂಕ್ ಅಧಿಕಾರಿ.
ಭಕ್ತರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಈ ಹಿಂದೆ ರಾಷ್ಟ್ರೀಯ ಬ್ಯಾಂಕ್ ಮತ್ತು ಖಾಸಗಿ ಬ್ಯಾಂಕ್‌ಗಳೊಂದಿಗೆ ಶನಿ ಶಿಂಗಣಾಪುರ ಗ್ರಾಮದಲ್ಲಿ ಹೊಸ ಶಾಖೆ ತೆಗೆಯುವ ಬಗ್ಗೆ ಚರ್ಚಿಸಲಾಗಿತ್ತು. ಆದರೆ ಇಲ್ಲಿರುವ ಭದ್ರತಾ ರಹಿತ ವ್ಯವಸ್ಥೆಗೆ ಸಾಕಷ್ಟು ಬ್ಯಾಂಕುಗಳು ಶಾಖೆ ತೆರೆಯಲು ನಿರಾಕರಿಸಿದವು. ಕೊನೆಗೆ ಯುನೈಟೆಡ್ ಕಮರ್ಶಿಯಲ್ (ಯುಕೊ) ಬ್ಯಾಂಕ್ ಇಲ್ಲಿನ ಸ್ಥಿತಿಗತಿಗಳನ್ನು ಅರಿತು ಶಾಖೆ ತೆರೆಯಲು ಮನಸು ಮಾಡಿತು ಎಂದು ಇಲ್ಲಿನ ಸ್ಥಳೀಯ ಕಾಂಗ್ರೆಸ್ ಶಾಸಕ ಶಂಕರ ಗಢಕ್ ಅವರು ತಿಳಿಸಿದ್ದಾರೆ.
ಗ್ರಾಮದಲ್ಲಿರುವ ಪ್ರಸ್ತುತ ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ ಶಾಖೆ ತೆರೆಯಲು ಬ್ಯಾಂಕ್ ನಿರ್ಧರಿಸಿತು. ಬ್ಯಾಂಕ್ ಶಾಖೆಗೆ ಬಾಗಿಲು ಇದೆ, ಆದರೆ ಎಂದಿಗೂ ಬೀಗ ಹಾಕುವುದಿಲ್ಲ. ಭದ್ರತಾ ಲಾಕರ್ ಮತ್ತು ಅಮೂಲ್ಯ ದಾಖಲೆಗಳಿಗೆ ಸೂಕ್ತ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ ಶಾಸಕರು.
ಆದರೆ ಇದರಿಂದ ಪೊಲೀಸರು ಅತೃಪ್ತರಾಗಿದ್ದಾರೆ. ಇದು ಕೇಂದ್ರ ರೂಪಿಸಿದ ನಿಯಮಾವಳಿಗಳ ಉಲ್ಲಂಘನೆ. ದಿನೇ-ದಿನೇ ಹೆಚ್ಚುತ್ತಿರುವ ಕಳ್ಳತನ, ಬ್ಯಾಂಕ್ ದರೋಡೆಗಳಿಂದಾಗಿ, ಪ್ರತೀ ಬ್ಯಾಂಕುಗಳಿಗೆ ಅತ್ಯಾಧುನಿಕ ಭದ್ರತಾ ವ್ಯವಸ್ಥೆಯನ್ನು ಕಡ್ಡಾಯಗೊಳಿಸಿದೆ. ಬೀಗ ಇಲ್ಲದೇ ಶಾಖೆ ತೆರೆದರೆ, ಅದು ನಿಯಮದ ಉಲ್ಲಂಘನೆಯಾಗುತ್ತದೆ. ಈ ವಿಷಯದ ಬಗ್ಗೆ ಪೊಲೀಸ್ ಮಹಾ ನಿರ್ದೇಶಕರು ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಜೊತೆ ಮಾತುಕತೆ ನಡೆಸುತ್ತೇವೆ ಎಂದಿದ್ದಾರೆ ಪೊಲೀಸರು.