ವಿಶ್ವದ ಉನ್ನತ ಸೆಲ್‌ಫೋನ್ ತಯಾರಿಕಾ ಕಂಪನಿ ನೋಕಿಯಾ, 2008ರಿಂದ ಇಪ್ಪತ್ತೇಳು ರಾಷ್ಟ್ರಗಳಲ್ಲಿ ಆರಂಭಿಸಿದ್ದ ತನ್ನ ಉಚಿತ ಸಂಗೀತ ಡೌನ್‌ಲೋಡ್ ಕೊಡುಗೆಯನ್ನು ಹಿಂತೆಗೆದುಕೊಳ್ಳುತ್ತಿದೆ.
ಆದರೆ ಭಾರತ, ಚೀನಾ ಮತ್ತು ಇಂಡೋನೇಷ್ಯಾದಲ್ಲಿ ನೋಕಿಯಾ 12 ತಿಂಗಳ ಚಂದಾದಾರಿಕೆಯ ಅವಧಿಗೆ ಸೀಮಿತಗೊಳಿಸಿ ಉಚಿತ ಸಂಗೀತ ಡೌನ್‌ಲೋಡ್ ಕೊಡುಗೆಯನ್ನು ಮುಂದುವರಿಸುತ್ತಿದೆ ಹಾಗೂ ಬ್ರೆಜಿಲ್, ಟರ್ಕಿ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಈ ಅವಧಿ ಆರು ತಿಂಗಳು ಆಗಿರುತ್ತದೆ.
ವಿವೇಂಡಿಸ್ ಯುನಿವರ್ಸಲ್ ಮ್ಯೂಸಿಕ್, ಇಎಂಐ, ವಾರ್ನರ್ ಮ್ಯೂಸಿಕ್ ಗ್ರೂಪ್ ಮತ್ತು ಸೋನಿ ಮುಂತಾದ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವ ಮೂಲಕ ನೋಕಿಯಾ, ಆಪಲ್ ಐಟ್ಯೂನ್ಸ್‌ಗೆ ಸವಾಲೊಡ್ಡಿತ್ತು.
ಯುರೋಪಿನ ಮಾರುಕಟ್ಟೆಯಲ್ಲಿ ಹೊಸ ಮೊಬೈಲ್‌ನ್ನು ಪರಿಚಯಿಸುವ ಪ್ರಾಯೋಗಿಕ ಮಾರುಕಟ್ಟೆ ಎಂದೇ ಪರಿಗಣಿಸಲ್ಪಟ್ಟಿರುವ ಬ್ರಿಟನ್‌ನಲ್ಲಿ ನೋಕಿಯಾ ಈ ಕೊಡುಗೆಯನ್ನು ಪ್ರಥಮ ಬಾರಿಗೆ 2008ರಲ್ಲಿ ಪ್ರಾರಂಭಿಸಿತ್ತು. ಆದರೆ ನಿರ್ವಹಣೆಯ ಕೊರತೆಯಿಂದ ಹೆಚ್ಚು ಗ್ರಾಹಕರನ್ನು ಆಕರ್ಷಿಸಲು ವಿಫಲವಾಯಿತು.
ಹಳೆಯ ತಂತ್ರಜ್ಞಾನವನ್ನು ಈ ಕೊಡುಗೆಗೆ ಬಳಸಿರುವುದು, ಒಂದು ಮೊಬೈಲ್ ಸೆಟ್‌ಗೆ ಸೀಮಿತವಾಗಿರುವ ಡಿಜಿಟಲ್ ಹಕ್ಕುಗಳ ನಿರ್ವಹಣೆ (ಡಿಆರ್ಎಂ) ಸಾಫ್ಟ್‌ವೇರ್ ಬಳಕೆ ಹಾಗೂ ಉಪಯೋಗಿಸಲು ಕಠಿಣ ಕ್ರಮ ಅನುಸರಿಸಬೇಕಾಗಿದ್ದರಿಂದ ಮಾರುಕಟ್ಟೆಯಲ್ಲಿ ಇದು ಹೆಚ್ಚು ಪ್ರಭಾವ ಬೀರಲಿಲ್ಲ.
ಮಾರುಕಟ್ಟೆಯಲ್ಲಿ ಡಿಆರ್ಎಂ (ಡಿಜಿಟಲ್ ಹಕ್ಕುಗಳ ನಿರ್ವಹಣೆ) ರಹಿತ ಸಂಗೀತ ಸೇವೆಗೆ ಬೇಡಿಕೆ ಇದ್ದು, 38 ರಾಷ್ಟ್ರಗಳಲ್ಲಿರುವ ನೋಕಿಯಾ ಸಂಗೀತ ಮಳಿಗೆಗಳಲ್ಲಿ ಡಿಆರ್ಎಂ-ರಹಿತ ಸೇವೆ ಲಭ್ಯವಿರುತ್ತದೆ ಎಂದಿದ್ದಾರೆ ನೋಕಿಯಾದ ವಕ್ತಾರರು. ಡಿಆರ್ಎಂ ಇದ್ದರೆ ಆ ಸಂಗೀತವನ್ನು ಬೇರೆ ಸಾಧನಗಳಲ್ಲಿ ಬಳಸಲಾಗುವುದಿಲ್ಲ.