ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಪೆಟ್ರೋಲ್ ಬೆಲೆ ಏರಿಕೆ: ಡೀಸೆಲ್ ವಾಹನಗಳಿಗೆ ಸುಗ್ಗಿ (Petrol | diesel-powered vehicle | Maruti Suzuki | CAGR)
Bookmark and Share Feedback Print
 
PTI
PTI
ಬಹುಶಃ ಪರಿಸರ ಸಚಿವ ಜೈರಾಮ್ ರಮೇಶ್‌ಗಿದು ಇಷ್ಟವಾಗಲಿಕ್ಕಿಲ್ಲ. ಆದರೆ ಏರುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯ ಅಂತರ, ಜನರನ್ನು ಕಡಿಮೆ ಹಣಕ್ಕೆ ಹೆಚ್ಚು ಮೈಲೇಜ್ ಕೊಡುವ ಡೀಸೆಲ್ ವಾಹನದ ಮೇಲೆ ಹಣ ತೊಡಗಿಸುವಂತೆ ಮಾಡಿದೆ.

ಮೊದಲೇ ಕಂಪನಿಗಳು ಡೀಸೆಲ್ ಚಾಲಿತ ವಾಹನಗಳನ್ನೇ ಅತೀ ಹೆಚ್ಚು ಉತ್ಪಾದಿಸುತ್ತಿರುವಾಗ, ಹಾಗೂ ಪ್ರಸ್ತುತ ಇರುವ ತೈಲ ಬೆಲೆ ಅಂತರ 20 ರೂ. ಆಗಿರುವುದರಿಂದ ಕಂಪನಿಗಳಿಗೆ ಡೀಸೆಲ್ ವಾಹನವನ್ನೇ ಉತ್ಪಾದಿಸಲು ಹೆಚ್ಚು ಪುಷ್ಟಿ ನೀಡಿದಂತಾಗಿದೆ. ಇದೇ ಅಂತರ ಮುಂದುವರಿದರೆ ಪೆಟ್ರೋಲ್ ವಾಹನಕ್ಕಿಂತ ಡೀಸೆಲ್ ವಾಹನಗಳ ತಯಾರಿಕೆಯ ಸಂಖ್ಯೆ ಹೆಚ್ಚಾಗಲಿದೆ ಎಂದು ಪ್ರಮುಖ ಕಾರು ಕಂಪನಿಗಳಾದ ಮಾರುತಿ, ಹುಂಡೈ, ಟೊಯೊಟಾದ ಅಧಿಕಾರಿಗಳು ತಿಳಿಸಿದ್ದಾರೆ.

ಎಲ್ಲಾ ರೀತಿಯ ಕಾರುಗಳ ಮಾರಾಟದಲ್ಲಿ ಡೀಸೆಲ್ ಕಾರುಗಳ ಮೇಲಿರುವ ಪಾಲು ಪ್ರಸ್ತುತ ಶೇ. 28 ರಷ್ಟಿದ್ದು, ನಿಧಾನವಾಗಿ ಅದರ ಪ್ರಮಾಣ ಏರಿಕೆಯಾಗುತ್ತಿದೆ. 2005-06 ರಲ್ಲಿ ಒಟ್ಟಾರೆ ಕಾರು ಮಾರಾಟ ಶೇ. 23 ರಷ್ಟಿತ್ತು. ಹಾಗೂ ತೈಲ ಬೆಲೆ ಏರಿಕೆ ಇದರ ಬೇಡಿಕೆಯನ್ನು ಹೆಚ್ಚಿಸುತ್ತಿದೆ ಎಂದು ಮಾರುತಿ ಸುಝುಕಿ ಕಂಪನಿಯ ಪ್ರಧಾನ ವ್ಯವಸ್ಥಾಪಕ ಶಶಾಂಕ್ ಶ್ರೀವಾಸ್ತವ ತಿಳಿಸಿದ್ದಾರೆ.

2005-06 ಮತ್ತು 2008-09ರ ನಡುವೆ ಡೀಸೆಲ್ ವಾಹನಗಳ ಸಮಗ್ರ ವಾರ್ಷಿಕ ಪ್ರಗತಿ ದರ (ಸಿಎಜಿಆರ್) ಶೇ. 22ರಷ್ಟು ಮತ್ತು ಪೆಟ್ರೋಲ್ ವಾಹನಗಳ ಸಿಎಜಿಆರ್ ಶೇ.12ರಷ್ಟು ಇತ್ತು. ಇದು ಯಾವ ವಾಹನಗಳಿಗೆ ಆದ್ಯತೆ ಇದೆ ಎಂಬುದನ್ನು ಸ್ಪಷ್ಟಪಡಿಸುತ್ತಿದೆ.

ಹಾಗೂ ಪೆಟ್ರೋಲ್ ವಾಹನಗಳಿಗೆ ಹೋಲಿಸಿದರೆ ಡೀಸೆಲ್ ವಾಹನಗಳ ಬೆಲೆ ಒಂದು ಲಕ್ಷದಷ್ಟು ಅಧಿಕ. ಆದರೆ ಡೀಸೆಲ್ ಬೆಲೆ ಮತ್ತು ಪೆಟ್ರೋಲ್ ಬೆಲೆಗಳನ್ನು ಆಯಾ ವಾಹನಗಳು ಕೊಡುವ ಮೈಲೇಜ್‌ನೊಂದಿಗೆ ತಾಳೆ ಹಾಕಿ ನೋಡಿದಾಗ, ಕಿಲೋಮೀಟರ್ ಒಂದಕ್ಕೆ ಡೀಸೆಲ್ ವಾಹನದ ವೆಚ್ಚವು 1.90 ರೂ. ಇದ್ದರೆ, ಪೆಟ್ರೋಲ್ ವಾಹನಗಳಲ್ಲಿ ಕಿಲೋಮೀಟರಿಗೆ 4 ರೂಪಾಯಿಯಷ್ಟಾಗುತ್ತದೆ. ಅಂದರೆ ಡೀಸೆಲ್ ವಾಹನವನ್ನು 3-4 ವರ್ಷ ಇಲ್ಲವೇ ಸುಮಾರು 37 -38 ಸಾವಿರ ಕಿ.ಮೀ. ಓಡಿಸಿದಾಗ ಈ ಹೆಚ್ಚುವರಿ ಹಣವು ವಾಪಸ್ ದೊರೆತಂತಾಗುತ್ತದೆ ಎಂದು ಶ್ರೀವಾಸ್ತವ ತಿಳಿಸಿದ್ದಾರೆ

ತಿಂಗಳಿಗೆ 3000 ಕಿ.ಮಿ ಗಿಂತ ಕಡಿಮೆ ದೂರ ವಾಹನ ಓಡಿಸುವವರು ಡೀಸೆಲ್ ವಾಹನಗಳ ಮೇಲೆ ಹೆಚ್ಚು ಆಕರ್ಷಿತರಾಗಿರುವುದಿಲ್ಲ ಎಂದು ಹುಂಡೈ ಇಂಡಿಯಾ ನಿರ್ದೇಶಕ ಅರವಿಂದ್ ಸೆಕ್ಸೇನಾ ಅಭಿಪ್ರಾಯ ಪಟ್ಟಿದ್ದಾರೆ.

ಆದರೆ, ಡೀಸೆಲ್ ವಾಹನಗಳ ಮಾರಾಟದಲ್ಲಿ ಒಂದಿಷ್ಟು ಪ್ರಗತಿಯಾಗಿದ್ದು ನಿಜವಾದರೂ, ದೊಡ್ಡ ಪ್ರಮಾಣದಲ್ಲಿ ಡೀಸೆಲ್ ವಾಹನಗಳತ್ತ ಜನ ಆಕರ್ಷಿತರಾಗಲಾರರು. ಪ್ರಮುಖ ಕಾರಣವೆಂದರೆ, ಪೆಟ್ರೋಲ್ ಎಂಜಿನ್ ಬಳಸುವವರು ಅದಕ್ಕೆ ಗ್ಯಾಸ್ ಕಿಟ್ಟನ್ನೂ ಅಳವಡಿಸಬಹುದು. ಮತ್ತು ಡೀಸೆಲ್ ಬೆಲೆಯೂ ಯಾವಾಗ ಏರುತ್ತದೆ ಎಂಬ ಬಗ್ಗೆ ಜನ ಗೊಂದಲದಲ್ಲಿದ್ದಾರೆ ಎಂದು ಟೊಯೋಟಾ ಕಿರ್ಲೊಸ್ಕರ್‌ನ ಉಪ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಸಿಂಗ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ