ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಬೆಲೆ ಏರಿಕೆ: ಕ್ರಮ ಕೈಗೊಳ್ಳಲು ರಾಜ್ಯಗಳಿಗೇ ಸೂಚಿಸಿದ ಕೇಂದ್ರ (Food Price | Inflation | Pranab Mukherjee | UPA | States | Price Rise)
Bookmark and Share Feedback Print
 
ಹೆಚ್ಚುತ್ತಿರುವ ಆಹಾರ ಹಣದುಬ್ಬರ ಮತ್ತು ಬೆಲೆಗಳನ್ನು ನಿಯಂತ್ರಿಸಲು ಏನು ಮಾಡಬೇಕೆಂಬ ಸಂದಿಗ್ಧ ಸ್ಥಿತಿಯಲ್ಲಿ ಸಿಲುಕಿರುವ ಕೇಂದ್ರದ ಯುಪಿಎ ಸರಕಾರ, ಬೆಲೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ರಾಜ್ಯಗಳು ಹೇರುವ ಆಕ್ಟ್ರಾಯ್, ಮಂಡಿ ತೆರಿಗೆ ಮುಂತಾದ ಸ್ಥಳೀಯ ಮೇಲ್ತೆರಿಗೆಗಳನ್ನು ತೆಗೆದುಹಾಕಬೇಕೆಂದು ಸೂಚಿಸಿದೆ.

ರಾಜ್ಯಗಳ ವಿತ್ತ ಸಚಿವರೊಂದಿಗೆ ಬಜೆಟ್ ಪೂರ್ವ ಸಮಾಲೋಚನೆ ಸಂದರ್ಭ ಬುಧವಾರ ಮಾತನಾಡಿದ ಕೇಂದ್ರ ಹಣಕಾಸು ಸಚಿವ ಪ್ರಣಬ್ ಮುಖರ್ಜಿ, ಆಹಾರ ವಸ್ತುಗಳ ಬೆಲೆ ಏರಿಕೆಗೆ ಕಾರಣಗಳಲ್ಲೊಂದಾದ ಸ್ಥಳೀಯ ತೆರಿಗೆಗಳನ್ನು ತೆಗೆದುಹಾಕಿ, ಆಹಾರ ಪೂರೈಕೆಗಿರುವ ಅಡಚಣೆಗಳನ್ನು ತೆಗೆದುಹಾಕಬೇಕೆಂದು ಆಗ್ರಹಿಸುತ್ತಿದ್ದೇನೆ ಎಂದರು.

ಹಣದುಬ್ಬರ ನಿಯಂತ್ರಿಸಲು ನಿಮ್ಮ ಕೊಡುಗೆಯನ್ನೂ ಸಲ್ಲಿಸಬೇಕು ಎಂದು ರಾಜ್ಯಗಳನ್ನು ಆಗ್ರಹಿಸಿರುವ ಅವರು, ಆಹಾರ ಹಣದುಬ್ಬರಕ್ಕೆ ಕಾರಣವಾಗಿರುವ ಪೂರೈಕೆ ಸರಪಣಿಯ ನಿರ್ವಹಣೆಗೆ ಅಡಚಣೆಯಾಗದಂತೆ, ವಿಶೇಷವಾಗಿ ಸಗಟು ಮತ್ತು ಚಿಲ್ಲರೆ ಮಾರಾಟದ ನಡುವಿನ ಕಂದಕ ನಿವಾರಣೆಗೆ ತ್ವರಿತವಾಗಿ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

ಬೆಲೆ ಏರಿಕೆ ಕುರಿತು ಕೇಂದ್ರ ಸರಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸುತ್ತಾ ಪ್ರಣಬ್, ಆಮದು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಮತ್ತು, ಅಗತ್ಯವಸ್ತುಗಳಿಗೆ ಸಂಬಂಧಿಸಿ ಅನಿವಾರ್ಯವಿದ್ದಲ್ಲಿ ರಫ್ತಿನ ಮೇಲೆ ನಿರ್ಬಂಧ ಹೇರಲಾಗುತ್ತಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ