ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮೊಬೈಲ್ ನಂಬರ್ ಪೋರ್ಟೆಬಿಲಿಟಿ: ಆಪರೇಟರ್ ಬದಲಿಸಿದ್ರಾ? (Mobile Number Portability | MNP | Mobile customer | Service Provider)
Bookmark and Share Feedback Print
 
ಎಲ್ಲರೂ ಮೊಬೈಲ್ ನಂಬರ್ ಇಟ್ಟುಕೊಂಡು, ಸರಿಯಾದ ಸೇವೆ ನೀಡದ ಆಪರೇಟರ್‌ಗಳನ್ನು (ಮೊಬೈಲ್ ಸೇವೆ ಪೂರೈಕೆದಾರರನ್ನು) ಬದಲಿಸುವ ಬಗ್ಗೆ ಯೋಚಿಸುತ್ತಿದ್ದೀರಲ್ಲವೇ? ಗುರುವಾರದಿಂದ ದೇಶಾದ್ಯಂತ ಈ ಪ್ರಕ್ರಿಯೆ ಜಾರಿಗೆ ಬಂದಿದ್ದು, ಹಲವಾರು ಮೊಬೈಲ್ ಸೇವಾ ಪೂರೈಕೆದಾರರು (ಸರ್ವಿಸ್ ಪ್ರೊವೈಡರ್‌ಗಳು) ಆತಂಕದಿಂದಲೇ ದಿನ ಆರಂಭಿಸಿದ್ದಾರೆ.

ಗ್ರಾಹಕರೆಲ್ಲರೂ ತಮ್ಮ ಹಳೆಯ ನಂಬರ್ ಉಳಿಸಿಕೊಳ್ಳಲು ಮತ್ತು ಗ್ರಾಹಕರ ಬಗ್ಗೆ ನಿಷ್ಕಾಳಜಿ ತೋರುವ ಕಂಪನಿಗಳಿಂದ ದೂರವಾಗಲು ಕಾತರದಿಂದ ಕಾಯುತ್ತಿರುವಂತೆಯೇ, ಯಾರನ್ನು ಹೆಚ್ಚು ನೆಚ್ಚಿಕೊಳ್ಳುತ್ತಾರೆ ಎಂಬುದು ಕಾದುನೋಡಬೇಕಾದ ಸಂಗತಿ. ಹೀಗಾಗಿ ಗ್ರಾಹಕರನ್ನು ಉಳಿಸಿಕೊಳ್ಳಲು ಮೊಬೈಲ್ ಸೇವಾ ಪೂರೈಕೆದಾರ ಕಂಪನಿಗಳು ಸಾಕಷ್ಟು ಕ್ರಮಗಳನ್ನು ಕೈಗೊಳ್ಳುವ ನಿರೀಕ್ಷೆಗಳಿವೆ. ಈಗಾಗಲೇ ಮೊಬೈಲ್ ನಂಬರ್ ಪೋರ್ಟೆಬಿಲಿಟಿಗಾಗಿಯೇ ಐಡಿಯಾ ಮತ್ತು ವೊಡಾಫೋನ್ ಕಂಪನಿಗಳು ಗ್ರಾಹಕ ಸೇವಾ ಸಂಖ್ಯೆಗಳನ್ನು ತೆರೆದುಕೊಂಡು ಭರ್ಜರಿ ಜಾಹೀರಾತಿನಲ್ಲಿ ತೊಡಗಿವೆ.

ದೇಶದ ಟೆಲಿಕಾಂ ನಿಯಂತ್ರಕ ಸಂಸ್ಥೆ ಟ್ರಾಯ್ ಮಾಡಿರುವ ಈ ಕ್ರಮದಿಂದಾಗಿ, ಸ್ಪರ್ಧಾತ್ಮಕತೆ ಇರುವುದರಿಂದ ಮೊಬೈಲ್ ಗ್ರಾಹಕರಿಗೆ ಹೆಚ್ಚು ಲಾಭ. ಅವರನ್ನು ಉಳಿಸಿಕೊಳ್ಳಲು ಸಾಕಷ್ಟು ಕೊಡುಗೆಗಳನ್ನು ನೀಡಬೇಕಾಗುತ್ತದೆ ಮತ್ತು ಬೇರೊಬ್ಬರ ಹಿಡಿತದಿಂದ ಗ್ರಾಹಕರನ್ನು ಸೆಳೆಯಬೇಕಾಗುತ್ತದೆ. ಇದರಿಂದಾಗಿ ಮೊಬೈಲ್ ಕಂಪನಿಗಳ ಲಾಭಾಂಶದಲ್ಲಿ ಕುಸಿತವಾಗುವ ನಿರೀಕ್ಷೆಗಳಿವೆ ಎಂದು ರೇಟಿಂಗ್ಸ್ ಏಜೆನ್ಸಿ ಐಸಿಆರ್ಎ ಹೇಳಿದೆ.

ಸೇವಾ ಗುಣಮಟ್ಟವನ್ನು ಮತ್ತಷ್ಟು ಸುಧಾರಿಸಬೇಕಿದೆ. ನೆಟ್ವರ್ಕ್ ಕವರೇಜ್ ಕೂಡ ಉನ್ನತೀಕರಣ ಮಾಡಬೇಕಾಗುತ್ತದೆ ಮತ್ತು 3ಜಿಯಂತಹಾ ಅತ್ಯಾಧುನಿಕ ಸೌಲಭ್ಯಗಳು ಕೂಡ ಹೆಚ್ಚಿನ ಗ್ರಾಹಕರನ್ನು ಸೆಳೆಯುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ.

ಈಗಿನ ಶುಲ್ಕ ವ್ಯವಸ್ಥೆಯಲ್ಲಿ ದೊಡ್ಡ ಮಟ್ಟದ ಬದಲಾವಣೆಗಳನ್ನು ನಿರೀಕ್ಷಿಸಲಾಗದು. ಹೀಗಾಗಿ ಗಟ್ಟಿಯಾದ ಆರ್ಥಿಕ ಬಲವುಳ್ಳ ಕಂಪನಿಗಳು ಈ ಹೊಸ ಸ್ಪರ್ಧಾತ್ಮಕತೆಯಲ್ಲಿ ಮೇಲೆ ಬರುವುದು ಸಾಧ್ಯ ಎನ್ನುತ್ತದೆ ಐಸಿಆರ್ಎ.

ಹೇಗೆ ಮಾಡುವುದು?
ಮೊದಲು ನೀವು ಪೋರ್ಟಿಂಗ್ ಮಾಡಬೇಕಾಗಿರುವ ಮೊಬೈಲ್ ನಂಬರಿನಿಂದ PORT ಎಂದು ಬರೆದು ಸ್ಪೇಸ್ ನೀಡಿ ನಿಮ್ಮ ಮೊಬೈಲ್ ಸಂಖ್ಯೆಯನ್ನೂ ಟೈಪ್ ಮಾಡಿ 1900 ಗೆ ಎಸ್ಎಂಎಸ್ ಕಳುಹಿಸಬೇಕು. ಆಗ ನಿಮಗೆ ನಿಮ್ಮ ಪ್ರಸ್ತುತ ಮೊಬೈಲ್ ಆಪರೇಟರ್‌ರಿಂದ ಒಂದು ವಿಶಿಷ್ಟ ಪೋರ್ಟಿಂಗ್ ಕೋಡ್ ಬರುತ್ತದೆ. ಅದನ್ನು ಹಿಡಿದುಕೊಂಡು ನೀವು ಅಪ್ಲಿಕೇಶನ್ ಫಾರ್ಮ್ ತುಂಬಿ ಹೊಸ ಮೊಬೈಲ್ ಆಪರೇಟರ್‌ಗೆ ಸಲ್ಲಿಸಬೇಕು.

ಪೋರ್ಟಿಂಗ್ ಮಾಡಲು ಶುಲ್ಕ ಕೇವಲ 19 ರೂಪಾಯಿ. ಪೋರ್ಟಿಂಗ್‌ಗೆ ಇರುವ ಸಮಯಾವಧಿ 7 ದಿನಗಳು. (ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ ಮತ್ತು ಈಶಾನ್ಯ ಸೇವಾ ಕೇಂದ್ರಗಳಲ್ಲಿ 15 ದಿನಗಳು)

ನೀವು ನಿಮ್ಮ ಹೊಸ ಮೊಬೈಲ್ ಆಪರೇಟರ್ ಬಳಿಗೆ ಹೋಗಿ, ಅಲ್ಲಿಂದ ಕಸ್ಟಮರ್ ಅಕ್ವಿಸಿಷನ್ ಫಾರ್ಮ್ ಮತ್ತು ಪೋರ್ಟಿಂಗ್ ಫಾರ್ಮ್ ಪಡೆದು ತುಂಬಿಸಿ. ಈ ಎರಡೂ ಫಾರ್ಮ್‌ಗಳನ್ನು ತುಂಬಿಸಿ, ಅಗತ್ಯವಿರುವ ವಿಳಾಸದ ದಾಖಲೆ, ಗುರುತಿನ ದಾಖಲೆ ಮತ್ತು ಭಾವಚಿತ್ರದೊಂದಿಗೆ ಹೊಸ ಮೊಬೈಲ್ ಆಪರೇಟರಿಗೆ ಸಲ್ಲಿಸಿ. ಪೋಸ್ಟ್ ಪೇಯ್ಡ್ ಗ್ರಾಹಕರಾಗಿದ್ದರೆ, ಹಿಂದಿನ ಬಿಲ್ ಪಾವತಿಸಿದ ದಾಖಲೆ ಪ್ರತಿಯನ್ನೂ ನೀಡಬೇಕಾಗುತ್ತದೆ. ಈಗ ಹೊಸ ಸರ್ವಿಸ್ ಪ್ರೊವೈಡರ್ (ಆಪರೇಟರ್)ರಿಂದ ಹೊಸ ಸಿಮ್ ಕಾರ್ಡ್ ನಿಮಗೆ ಸಿಗುತ್ತದೆ.

ನಿಮ್ಮ ಮನಸ್ಸು ಬದಲಾಯಿಸಲು 24 ಗಂಟೆ ಅವಧಿಯೂ ಇದೆ. ಅಂದರೆ ಅದರೊಳಗೆ ನೀವು ಈ ಅರ್ಜಿಯನ್ನು ಹಿಂತೆಗೆದುಕೊಳ್ಳಲೂಬಹುದು.ಜಿಎಸ್ಎಂ ಮತ್ತು ಸಿಡಿಎಂಎ ತಂತ್ರಜ್ಞಾನಗಳ ನಡುವೆಯೂ ನೀವು ಬದಲಾಗಬಹುದು.

ನಿಮ್ಮ ಹೊಸ ಸೇವಾ ಪೂರೈಕೆದಾರರು ಯಾವ ದಿನ, ಯಾವ ಸಮಯ ಪೋರ್ಟಿಂಗ್ ಮಾಡಲಾಗುತ್ತದೆ ಎಂಬುದನ್ನು ತಿಳಿಸುತ್ತಾರೆ. ಆ ಸಮಯದ ನಂತರ ಹಳೆ ಸಿಮ್ ಬದಲಾಯಿಸಿ, ಹೊಸದನ್ನು ಹಾಕಿಕೊಳ್ಳಿ.

ಮತ್ತೆ ನೀವು ಸರ್ವಿಸ್ ಪ್ರೊವೈಡರ್‌ನನ್ನು ಬದಲಿಸಬೇಕಿದ್ದರೆ ಕನಿಷ್ಠ 90 ದಿನಗಳು ಕಾಯಬೇಕು. ಮತ್ತು ನಿಮ್ಮ ಸರ್ವಿಸ್ ಏರಿಯಾದಲ್ಲಿ ಮಾತ್ರವೇ ನೀವು ಆಪರೇಟರ್‌ರನ್ನು ಬದಲಾಯಿಸಬಹುದು. ಅಂದರೆ ಬೇರೆ ರಾಜ್ಯದಲ್ಲಿ/ಪ್ರದೇಶದಲ್ಲಿ ಹೋಗಿ ಬದಲಾಯಿಸುವಂತಿಲ್ಲ. ಆದರೆ ಪ್ರೀಪೇಡ್ ಗ್ರಾಹಕರಾಗಿದ್ದರೆ, ಮೊದಲು ನಿಮ್ಮ ಈ ಸಿಮ್‌ನಲ್ಲಿರುವ ಬ್ಯಾಲೆನ್ಸ್ ಮೊತ್ತವನ್ನೆಲ್ಲಾ ಖಾಲಿ ಮಾಡಿದ ಬಳಿಕವಷ್ಟೇ ಆಪರೇಟರ್ ಬದಲಿಸಬೇಕು, ಇಲ್ಲವಾದಲ್ಲಿ, ಆಪರೇಟರ್ ಬದಲಿಸಿದಾಗ ಬಾಕಿ ಹಣ ಗೋತಾ!

ಹಾಗಿದ್ದರೆ ನಿಮ್ಮ ಆಯ್ಕೆ ಯಾವುದು? ಮತ್ತು ಯಾಕಾಗಿ ನೀವು ಈ ಬದಲಾವಣೆ ಬಯಸುತ್ತಿದ್ದೀರಿ? ಇಲ್ಲೇ ಕೆಳಗೆ ಚರ್ಚಿಸಿ.
ಸಂಬಂಧಿತ ಮಾಹಿತಿ ಹುಡುಕಿ