ಬೆಲೆ ಏರಿಕೆ ಕುರಿತು ಕೊನೆಗೂ ದಿಟ್ಟವಾಗಿ ಮಾತನಾಡಿರುವ ಪ್ರಧಾನಿ ಮನಮೋಹನ್ ಸಿಂಗ್, ಯಾವಾಗ ಬೆಲೆಗಳು ಇಳಿಯುತ್ತವೆ ಎಂದು ಹೇಳಲು ತಾನೇನೂ ಜ್ಯೋತಿಷಿಯಲ್ಲ. ಆದರೂ ಮಾರ್ಚ್ ತಿಂಗಳ ಹೊತ್ತಿಗೆ ಬೆಲೆಗಳು ಇಳಿಯುತ್ತವೆ ಎಂದು ಹೇಳಬಲ್ಲೆ ಎಂಬುದಾಗಿ ತಿಳಿಸಿದ್ದಾರೆ. ಇದಲ್ಲದೆ, ಕೆಲವು ಸಂಗತಿಗಳು ಸರಕಾರದ ನಿಯಂತ್ರಣದಲ್ಲಿಲ್ಲ ಎಂಬುದನ್ನೂ ಒಪ್ಪಿಕೊಂಡಿದ್ದಾರೆ.
ಸಂಪುಟ ಪುನಾರಚನೆ ಬಳಿಕ ಪ್ರಮಾಣವಚನ ಸ್ವೀಕಾರ ಸಮಾರಂಭ ಸಂದರ್ಭ ಬುಧವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಮನಮೋಹನ್ ಸಿಂಗ್, 'ಕೆಲವು ಸಂಗತಿಗಳು ಸರಕಾರದ ನಿಯಂತ್ರಣ ಮೀರಿ ಹೋಗಿವೆ. ಈ ಸಮಸ್ಯೆಯ ಹೊರತಾಗಿಯೂ, ಮಾರ್ಚ್ ವೇಳೆಗೆ ಬೆಲೆಗಳು ಸ್ಥಿರವಾಗಲಿವೆ ಎಂಬ ವಿಶ್ವಾಸವಿದೆ' ಎಂದಿದ್ದಾರೆ.
ಇದಕ್ಕೆ ಮೊದಲು, ಬಜೆಟ್ ಪೂರ್ವ ಸಮಾಲೋಚನೆ ನಿಮಿತ್ತ ಕೇಂದ್ರ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಅವರು ರಾಜ್ಯಗಳ ಹಣಕಾಸು ಸಚಿವರೊಂದಿಗೆ ಮಾತುಕತೆ ನಡೆಸಿ, ಬೆಲೆ ಇಳಿಕೆಗಾಗಿ ರಾಜ್ಯಗಳೂ ಕೂಡ ಸ್ಥಳೀಯ ಸುಂಕಗಳನ್ನು ಕಡಿತಗೊಳಿಸಿ ಸಹಕರಿಸಬೇಕು ಎಂದು ಕೋರಿದ್ದರು.