ಗೋವಾದಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ ಆರೋಪಕ್ಕೆ ಗುರಿಯಾಗಿರುವ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ರಾಷ್ಟ್ರೀಯ ಕಾರ್ಯದರ್ಶಿ ಜಿತೇಂದ್ರ ದೇಶಪ್ರಭು ಅವರಿಗೆ 1 ಕೋಟಿ 72 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ ಜಮೀನು ತನ್ನದೇ, ಆದರೆ ಗಣಿಗಾರಿಕೆಯಲ್ಲಿ ತನ್ನದೇನೂ ಪಾಲಿಲ್ಲ ಎಂದು ದೇಶಪ್ರಭು ವಾದಿಸಿದ್ದರು.
ಆದರೆ, ಗಣಿ ಇಲಾಖೆಯ ದಾಖಲೆಗಳ ಪ್ರಕಾರ, ಒಂದು ಕಾಲದಲ್ಲಿ ವಸಾಹತುಶಾಹಿ ಪೋರ್ಚುಗೀಸರ ಆಡಳಿತಾವಯಲ್ಲಿ ಕಂದಾಯ ಸಂಗ್ರಹಣೆಗೆಂದು ನೇಮಕಗೊಂಡಿದ್ದ ಕುಟುಂಬಕ್ಕೆ ಸೇರಿದ ದೇಶಪ್ರಭು, ಪಣಜಿಯಿಂದ 30 ಕಿ.ಮೀ. ದೂರದಲ್ಲಿರುವ ಪೆರ್ನೆಮ್ ಉಪಜಿಲ್ಲೆಯಲ್ಲಿ ಭಾರೀ ಜಮೀನು ಹೊಂದಿದ್ದು, ಈಗಾಗಲೇ ಸುಮಾರು 15 ಸಾವಿರ ಟನ್ ಕಬ್ಬಿಣದ ಅದಿರನ್ನು ಗಣಿಗಾರಿಕೆ ಮಾಡಿ, ಅದನ್ನು ಪಕ್ಕದ ಕೋರ್‌ಗಾವ್ ಗ್ರಾಮದ ಜಮೀನಿನಲ್ಲಿ ರಾಶಿ ಹಾಕಿದ್ದಾರೆ.
ಅಲ್ಲಿ ನಡೆದ ಗಣಿಗಾರಿಕೆಯ ಆಳ-ಅಗಲವನ್ನು ವಿಶ್ಲೇಷಿಸಿದರೆ, ಈಗಾಗಲೇ 50 ಸಾವಿರ ಟನ್ ಅದಿರು ಗಣಿಗಾರಿಕೆ ನಡೆಸಲಾಗಿದೆ ಎಂಬಂತೆ ತೋರುತ್ತಿದೆ ಎಂದು ರಾಜ್ಯ ಗಣಿ ಇಲಾಖೆಯು ಸಿದ್ಧಪಡಿಸಿದ ಕರಡು ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.