ಬೆಲೆ ಏರಿಕೆಯ ಈ ಯುಗದಲ್ಲಿ ಜಮೀನು ಬೆಲೆಗಳು ಜನ ಸಾಮಾನ್ಯರ ಕೈಗೆಟುಕದಷ್ಟು ಮೇಲಕ್ಕೆ ಹೋಗಿವೆ ಎಂಬುದಕ್ಕೆ ಮತ್ತೊಂದು ದೃಷ್ಟಾಂತ ಮುಂಬೈಯಲ್ಲಿ ನಡೆದಿದೆ. ದೊಂಬಿವಿಲಿ ಉಪನಗರದಲ್ಲಿ ಈಗ ನಿಷ್ಕ್ರಿಯವಾಗಿರುವ ಪಾಲ್-ಪ್ಯೂಜಿಯಟ್ ಆಟೋ ಕಂಪನಿಗೆ ಸೇರಿದ್ದ 135 ಎಕರೆ ಖಾಲಿ ನಿವೇಶನವನ್ನು ಹರಾಜು ಹಾಕಲಾಗಿದ್ದು, ಅದು 601 ಕೋಟಿ ರೂಪಾಯಿಗೆ ಹರಾಜಾಗುತ್ತಿದೆ.
ಮೆಟ್ರೋಪಾಲಿಟನ್ ಇನ್ಫ್ರಾಹೌಸಿಂಗ್ ಪ್ರೈ. ಲಿ. (ಗ್ಯಾಮನ್ ಇಂಡಿಯಾದ ಉಪ ಸಂಸ್ಥೆ) ಸಂಸ್ಥೆಯು ಇಷ್ಟು ಮೊತ್ತದ ಬಿಡ್ ಮಾಡಿದೆ. 180 ಎಕರೆ ಪ್ರದೇಶವನ್ನು ಮಾರಾಟ ಮಾಡುವ 12 ವರ್ಷಗಳ ಪ್ರಯತ್ನದಲ್ಲಿ ಇದು ಹೊಸ ಬೆಳವಣಿಗೆ.
ಗ್ಯಾಮನ್ಸ್‌ಗೆ ಅತೀ ಸಮೀಪದಲ್ಲಿ ಬಿಡ್ ಮಾಡಿದ್ದೆಂದರೆ ನೆಪ್ಚೂನ್ ಗ್ರೂಪ್. ಅದು ಒಂದು ಕೋಟಿ ಕಡಿಮೆ ಬಿಡ್ ಮಾಡಿತ್ತು. 3ನೇ ಬಿಡ್ಡರ್ ಆಗಿದ್ದ ಒಬೆರಾಯ್ ರಿಯಾಲ್ಟಿ 300 ಕೋಟಿ ರೂ. ಬಿಡ್ ಮಾಡಿತ್ತು. ಇತ್ತೀಚೆಗೆ ಜಮೀನು ಬೆಲೆಗಳು ಬಹುತೇಕ ನೈಜತೆಯ ಸ್ಥಿತಿಗೆ ಕುಸಿಯುತ್ತಿರುವುದರಿಂದ ಇದು ಅತ್ಯಂತ ಮಹತ್ವದ ಡೀಲ್ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಡುತ್ತಾರೆ.
ಈ ಜಮೀನು ಮಾರಾಟವಾಗುತ್ತಿರುವುದು ಕಂಪನಿಯ ಕೆಲಸ ಕಳೆದುಕೊಂಡ 1712 ನಿರುದ್ಯೋಗಿಗಳಿಗೂ ವರವಾಗಲಿದೆ. 2005ರಲ್ಲಿ ಕಂಪನಿ ಮುಚ್ಚಿದಂದಿನಿಂದ ಬಾಕಿ ಹಣಕ್ಕಾಗಿ ಅವರು ಹೋರಾಡುತ್ತಿದ್ದರು. ಇದೀಗ ಜಮೀನು ಮಾರಾಟವಾಗಿ ಬಂದ ಹಣದಿಂದ ಬಾಕಿ ದೊರೆಯುವುದೆಂಬ ನಿರೀಕ್ಷೆ ಅವರದು.