ಕಳೆದ ಜನವರಿಯಿಂದ ಡಿಸೆಂಬರ್‌ರವರೆಗಿನ ಅವಧಿಯಲ್ಲಿ ಪ್ರತಿಷ್ಠಿತ ಕಾರು ಕಂಪನಿ ಫೋರ್ಡ್, ಭಾರತದಲ್ಲಿ ದಾಖಲೆಯ ಮಾರಾಟ ಕಂಡಿದೆ. ಇದು 2009ರ ಇದೇ ಅವಧಿಯಲ್ಲಿ ಕಂಡಂತಹ ಮಾರಾಟ ಪ್ರಮಾಣಕ್ಕಿಂತ ಮೂರು ಪಟ್ಟು ಅಧಿಕಮಟ್ಟದ್ದಾಗಿದೆ ಎಂದು ಕಂಪನಿ ಶುಕ್ರವಾರ ತಿಳಿಸಿದೆ.
2009ರ ಜನವರಿಯಿಂದ ಡಿಸೆಂಬರ್‌ವರೆಗಿನ ಅವಧಿಯಲ್ಲಿ 29,488 ಕಾರುಗಳು ಮಾರಾಟವಾಗಿದ್ದರೆ, 2010ರ ಇದೇ ಅವಧಿಯಲ್ಲಿ ಇದರ ಮೂರುಪಟ್ಟು ಹೆಚ್ಚು ಅಂದರೆ, 83,887 ಕಾರು ಮಾರಾಟವಾಗಿದೆ. ಇದು ಶೇಕಡಾವಾರು 172 ರಷ್ಟು ಏರಿಕೆಯ ಅಂತರವಾಗಿದೆ ಎಂದು ಫೋರ್ಡ್ ಇಂಡಿಯಾ ಉಪಾಧ್ಯಕ್ಷ ಅನುರಾಗ್ ಮೆಹರೋತ್ರಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕಂಪನಿಯನ್ನು ಮತ್ತಷ್ಟು ಬಲಿಷ್ಠಗೊಳಿಸಲು ಭಾರತದಾದ್ಯಂತ ಇರುವ ಸುಮಾರು ನೂರು ನಗರಗಳಲ್ಲಿನ (ಘಟಕ) ವಿತರಕರ ಸಂಖ್ಯೆಯನ್ನು 170ಕ್ಕೆ ಹೆಚ್ಚಿಸಲಾಗಿದೆ ಎಂದ ಮೆಹರೋತ್ರಾ, ಕಂಪನಿಯ 'ಫಿಗೊ' ಕಾರು 'ಭಾರತದ ವರ್ಷದ ಕಾರು' ಮತ್ತು 'ಇಟಿ ಝಿಗ್ ವೀಲ್ಸ್‌ನ 2010ರ ವರ್ಷದ ಕಾರು' ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.