ಇಬ್ಬರು ವಿದೇಶೀಯರಿಗೆ ಅಕ್ರಮವಾಗಿ ಡ್ರಗ್ ಮಾರಾಟ ಮಾಡುತ್ತಿರುವುದು ಗುಪ್ತ ಕ್ಯಾಮೆರಾದಲ್ಲಿ ಸಾಬೀತಾಗಿರುವ ಹಿನ್ನೆಲೆಯಲ್ಲಿ ಸಬ್ ಇನ್‌ಸ್ಪೆಕ್ಟರ್ ಸುನಿಲ್ ಗುಡ್ಲರ್ ಮೇಲೆ ಗೋವಾ ಪೊಲೀಸರು ಕೇಸು ದಾಖಲಿಸಿದ್ದಾರೆ. ಈ ಇಬ್ಬರು ವಿದೇಶಿಯರು ಇಸ್ರೇಲಿನ ಕುಖ್ಯಾತ ಡ್ರಗ್ ವ್ಯಾಪಾರಿ ಡೇವಿಡ್ ಡ್ರಿಹಾಂ ಅಲಿಯಾಸ್ ಡುಡುನ ರಕ್ತ ಸಂಬಂಧಿಗಳೆಂದು ತಿಳಿದುಬಂದಿದೆ.
ಕಳೆದ ಕೆಲವು ವಾರಗಳ ಹಿಂದೆ ಬೆಳಕಿಗೆ ಬಂದ ಈ ಪ್ರಕರಣವನ್ನು ತನಿಖೆಗೆ ಕೈಗೆತ್ತಿಕೊಂಡ ವಿಶೇಷ ತನಿಖಾ ತಂಡ (ಎಸ್ಐಟಿ), ಗುಡ್ಲರ್ ವಿರುದ್ಧ ಕೇಸು ದಾಖಲಿಸಿದೆ.
ಸಬ್ ಇನ್‌ಸ್ಪೆಕ್ಟರ್ ವಿರುದ್ಧ ಕೇಸು ಮಾತ್ರ ದಾಖಲಾಗಿದೆ. ಆದರೆ ಬಂಧನ ಕಾರ್ಯ ಪ್ರಕರಣದ ತನಿಖೆ ಪೂರ್ಣಗೊಂಡ ನಂತರವಷ್ಟೇ ಆಗಬೇಕಿದೆ ಎಂದು ಪೊಲೀಸ್ ವಕ್ತಾರ ಆತ್ಮರಾಮ್ ದೇಶಪಾಂಡೆ ಹೇಳಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿನ ಪ್ರಥಮ ದರ್ಜೆ ನ್ಯಾಯಾಲಯಲ್ಲಿ (ಜೆಎಂಎಫ್‌ಸಿ) ಸಲ್ಲಿಸಲಾಗಿರುವ ಅರ್ಜಿಯಲ್ಲಿ, ಇಲ್ಲಿನ ಮಾಜಿ ಪೊಲೀಸ್ ಅಧೀಕ್ಷಕ, ಪ್ರಸ್ತುತ ಅರುಣಾಚಲ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ವೀನು ಬನ್ಸಾಲ್ ಮತ್ತು ಗೃಹ ಸಚಿವ ರವಿ ನಾಯಕ್ ಅವರ ಮಗ ರಾಯ್ ಅವರ ಹೆಸರನ್ನೂ ಉಲ್ಲೇಖಿಸಲಾಗಿದೆ.
ಈ ಹಿಂದೆ, ಗೋವಾದ ಮಾದಕ ವಸ್ತು ನಿಷೇಧ ವಿಭಾಗಕ್ಕೆ ನಿಯುಕ್ತಿಗೊಂಡಿದ್ದ ಸುನಿಲ್ ಗುಡ್ಲರ್, ಅಕ್ರಮ ಮಾದಕ ವಸ್ತು ಪ್ರಕರಣವೊಂದಕ್ಕೆ ಸಂಬಂಧಿಸಿ ಡ್ರಗ್ ವ್ಯಾಪಾರಿ ಡೇವಿಡ್ ಡ್ರಿಹಾಂ ನನ್ನು ಬಂಧಿಸಿದ್ದರು.