ಈರುಳ್ಳಿ ಬೆಲೆ ಏರಿಕೆಯಿಂದಾಗಿ ಗ್ರಾಹಕರ ಕಣ್ಣೀರು ಇನ್ನೂ ಮುಗಿದಿಲ್ಲ. ಆದರೆ, ಇದೀಗ ರೈತರು ಕಣ್ಣೀರು ಹರಿಸತೊಡಗಿದ್ದಾರೆ. ಇದಕ್ಕೆ ಕಾರಣವಾಗಿದ್ದು ಸೋಮವಾರ ಗದಗ ಎಪಿಎಂಸಿಯಲ್ಲಿ ಈರುಳ್ಳಿ ಬೆಲೆ ಕ್ವಿಂಟಾಲಿಗೆ 500 ರೂಪಾಯಿಗೆ ಇಳಿದದ್ದು! ಅಂದರೆ, ಕಿಲೋ ಒಂದಕ್ಕೆ 15 ರೂಪಾಯಿ ಇದ್ದ ಈರುಳ್ಳಿ ಬೆಲೆ, ದಿಢೀರನೇ 5 ರೂಪಾಯಿಗೆ ಕುಸಿಯಿತು.
ಇದನ್ನು ಖಂಡಿಸಿ ಗದಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಚೇರಿಯಲ್ಲಿ ರೈತರು ಸೋಮವಾರ ಪ್ರತಿಭಟನೆ ನಡೆಸಿದರು.
ಇದಕ್ಕೆ ಮೂಲ ಕಾರಣವೆಂದರೆ, ಏಷ್ಯಾದ ಅತಿದೊಡ್ಡ ಈರುಳ್ಳಿ ಮಾರುಕಟ್ಟೆಯಾಗಿರುವ ಮಹಾರಾಷ್ಟ್ರದ ಲಸಲ್‌ಗಾಂವ್ ಮತ್ತು ನಾಸಿಕ್‌ಗಳಲ್ಲಿ ಈರುಳ್ಳಿ ಬೆಲೆ ಕುಸಿದಿರುವುದು.
ಇತ್ತೀಚೆಗೆ ಈರುಳ್ಳಿ ಬೆಲೆಯು ಇಳಿಮುಖವಾಗಿರುವುದರಿಂದ ಮಾರಾಟವೂ ಕೊಂಚ ಚೇತರಿಸಿಕೊಂಡಿತ್ತು. ಲಸಲ್‌ಗಾಂವ್‌ನಲ್ಲಿ ಸಗಟು ಮಾರಾಟದ ಬೆಲೆಯು ಸೋಮವಾರ ಕಿಲೋಗೆ 13 ರೂ. ಗೆ ಇಳಿದಿತ್ತು.
ಶನಿವಾರ ಈ ಬೆಲೆಯು ದುಪ್ಪಟ್ಟು ಅಂದರೆ 26 ರೂ. ಇತ್ತು. ಈರುಳ್ಳಿಯ ಈ ವರ್ಷದ ಮೂರನೇ ಬೆಳೆಯು ಮಾರುಕಟ್ಟೆಗೆ ಸಾಕಷ್ಟು ಪ್ರಮಾಣದಲ್ಲಿ ಆಗಮಿಸುತ್ತಿರುವುದರಿಂದ ಈ ಪರಿ ಬೆಲೆ ಇಳಿಕೆಗೆ ಕಾರಣವಾಗಿದ್ದು, ಗ್ರಾಹಕರಿಗೆ ಸಂತಸ ತಂದಿದೆ.