ಬೆಲೆ ಏರಿಕೆಗಳ ಸರಪಣಿಗೆ ಸೇರ್ಪಡೆ. ಪೆಟ್ರೋಲ್, ಡೀಸೆಲ್ ಬೆಲೆಯೂ ಜಾಸ್ತಿಯಾಗುತ್ತಿರುವುದರೊಂದಿಗೆ ಅವುಗಳನ್ನು ಬಳಸಿಕೊಳ್ಳುವ ಕಾರುಗಳ ಬೆಲೆಯನ್ನೂ ಏರಿಸಲು ದೇಶದ ಪ್ರಮುಖ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ನಿರ್ಧರಿಸಿದ್ದು, ಸುಮಾರು 8000 ರೂಪಾಯಿವರೆಗೆ ಏರಿಕೆಯಾಗಲಿದೆ.
ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದಾಗಿ ಮಾರುತಿ ಸುಜುಕಿ ಇಂಡಿಯಾ ಕಂಪನಿಯು ತನ್ನ ಎಲ್ಲ ಮಾಡೆಲ್‌ಗಳ ಬೆಲೆಯನ್ನೂ ಏರಿಸಿದೆಯಾದರೂ, ಇತ್ತೀಚೆಗೆ ಹೊರತಂದಿರುವ ಆಲ್ಟೋ ಕೆ-10 ಮಾಡೆಲ್‌ಗಳ ಬೆಲೆಯನ್ನು ಏರಿಸುತ್ತಿಲ್ಲ.
ಮಾರುತಿ ಕಾರುಗಳ ಬೆಲೆಯನ್ನು ಜನವರಿ 17ರಿಂದ ಶೇ. 0.5ರಿಂದ ಶೇ.0.22ರವರೆಗೆ ಏರಸಲಾಗಿದೆ ಎಂಬುದನ್ನು ಮಾರುತಿ ಇಂಡಿಯಾ ಆಡಳಿತ ನಿರ್ವಹಣಾಧಿಕಾರಿ ಮಾಯಾಂಕ್ ಪಾರೀಖ್ ಖಚಿತಪಡಿಸಿದ್ದಾರೆ.
ಹೊಸ ಹ್ಯಾಚ್‌ಬ್ಯಾಕ್ ಆಲ್ಟೋ ಕೆ-10 ಹೊರತಾಗಿ, ವಿವಿಧ ಮಾಡೆಲ್‌ಗಳ ಬೆಲೆಯು 1 ಸಾವಿರದಿಂದ 8 ಸಾವಿರ ರೂ.ವರೆಗೆ ಏರಿಸಲಾಗಿದೆ. ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನವರಿ ತಿಂಗಳಿಂದ ಬೆಲೆ ಏರಿಸುವುದಾಗಿ ಕಳೆದ ಡಿಸೆಂಬರ್‌ನಲ್ಲಿಯೇ ಮಾರುತಿಯು ಘೋಷಿಸಿತ್ತು.
ಕಿಲೋಗೆ 100 ರೂಪಾಯಿ ಇದ್ದ ರಬ್ಬರ್ ಬೆಲೆ ದುಪ್ಪಟ್ಟಾಗಿದೆ. ತಾಮ್ರದ ಬೆಲೆಯೂ ಶೇ.12ರಿಂದ ಶೇ.15ರಷ್ಟು ಏರಿಕೆಯಾಗಿದೆ. ಉಕ್ಕಿನ ಬೆಲೆಯೂ ಇದೇ ಮಾದರಿಯಲ್ಲಿ ಏರಿಕೆಯಾಗಿದೆ. ಹೀಗಾಗಿ ಬೆಲೆ ಏರಿಕೆ ಅನಿವಾರ್ಯವಾಗಿತ್ತು ಎಂದಿದ್ದಾರೆ ಪಾರೀಖ್.